Devotional

ಅನ್ನ ನೀಡುವ ತಾಯಿಯ ದಿವ್ಯ ಸನ್ನಿಧಿ: Horanadu Annapoorne..!

ಅನ್ನ ನೀಡುವ ತಾಯಿಯ ದಿವ್ಯ ಸನ್ನಿಧಿ: Horanadu Annapoorne..!
ಆಹಾರದ ದೇವತೆಯ ತಾಣ. ಅಲ್ಲಿ ದೇವಿಯನ್ನು ಮೆಚ್ಚಿಸುವುದಕ್ಕಾಗಿ ಭಕ್ತರು ಉಪವಾಸ ವ್ರತಗಳನ್ನು ಕೈಗೊಳ್ಳುವುದನ್ನು ಆ ದೇವಿ ಮೆಚ್ಚುವುದಿಲ್ಲ. ಇಡೀ ವಿಶ್ವದ ಹಸಿವನ್ನು ನೀಗಿಸಿದ ದೇವತೆ ಅವಳು. ಸಹ್ಯಾದ್ರಿಯ ಮಡಿಲಿನಲ್ಲಿ ನೆಲೆನಿಂತು ಬ್ರಹ್ಮಾಂಡವನ್ನು ಪೋಷಿಸುತ್ತಿದ್ದಾಳೆ ಎಂದು ನಂಬಲಾಗುತ್ತದೆ. ಹಾಗಾದರೆ ಆ ದೇವಾಲಯ ಯಾವುದು, ಅಲ್ಲಿನ ಸ್ಥಳ ಮಹಾತ್ಮೆ ಏನು ನೋಡೋಣ.
ಎತ್ತ ನೋಡಿದರೂ ಹಚ್ಚ ಹಸಿರ ಪರ್ವತಗಳ ಸಾಲು, ಅವುಗಳ ಮಧ್ಯೆ ಬಳುಕುತ್ತಾ ಹರಿಯುವ ಭದ್ರಾ ನದಿ (Bhadra River). ಈ ಭದ್ರೆಯ ತಟದಲ್ಲಿ, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಪ್ರಕೃತಿ ಸೌಂದರ್ಯವನ್ನೆಲ್ಲಾ ಮೈದುಂಬಿಕೊಂಡು ನಿಂತಿರುವ ಪ್ರದೇಶ ಹೊರನಾಡು (Horanadu) – ತಾಯಿ ಅನ್ನಪೂರ್ಣೇಶ್ವರಿಯ ನೆಲೆಬೀಡು. ಈ ದೇವಾಲಯವನ್ನು ವೀಕ್ಷಿಸಲು, ತಾಯಿ ಅನ್ನಪೂರ್ಣೆಯ ದರ್ಶನಕ್ಕಾಗಿ ನಾನಾ ಕಡೆಗಳಿಂದ ಜನರು ಹೊರನಾಡಿಗೆ ಆಗಮಿಸುತ್ತಾರೆ.
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ (Chikkamagaluru District) ಮೂಡಿಗೆರೆ ತಾಲೂಕಿನ ಹೊರನಾಡಿನಲ್ಲಿ ಈ ದೇವಾಲಯವಿದೆ. ಭದ್ರಾ ನದಿಯಿಂದ ಕೊಂಚ ಒಳಭಾಗದಲ್ಲಿ, ಸಹ್ಯಾದ್ರಿಯ ಗುಡ್ಡ ಬೆಟ್ಟಗಳ ನಡುವಿನ ದಿಬ್ಬದ ಮೇಲೆ ಈ ಅನ್ನಪೂರ್ಣೇಶ್ವರಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಹಸಿರು ಸಿರಿಯ ನಡುವೆ ಮುತ್ತಿನಂತೆ ಕಂಗೊಳಿಸುವ ಈ ದೇವಾಲಯಕ್ಕೆ ಸಹ್ಯಾದ್ರಿ ಗಿರಿಯೇ ದಿಗ್ಪಾಲಕನಂತೆ ರಕ್ಷಣೆಯನ್ನು ನೀಡುತ್ತಿದೆ ಎಂಬುದು ವಿಶೇಷ.
"ಅನ್ನ" ಎಂದರೆ ಆಹಾರ ಎಂಬುದನ್ನು ಸೂಚಿಸಿದರೆ, "ಪೂರ್ಣೆ" ಎಂಬುದು ಸಂಪೂರ್ಣತೆಯನ್ನು ಸೂಚಿಸುತ್ತದೆ. ಹೀಗಾಗಿ ಶಿವಸತಿ ಈಶ್ವರಿಯ ಒಂದು ಸ್ವರೂಪವಾಗಿರುವ ತಾಯಿ ಅನ್ನಪೂರ್ಣೇಶ್ವರಿ ಸಮೃದ್ಧತೆಯ ಸಂಕೇತ. ಆಕೆಯನ್ನು ಶಿವಸತಿ ಪಾರ್ವತಿ, ಆದಿಶಕ್ತಿಯ ಒಂದು ಸ್ವರೂಪ ಎಂದು ಕರೆಯಲಾಗುತ್ತದೆ. ದುರ್ಗೆಯ ಅನ್ನಪೂರ್ಣೇಶ್ವರಿ ಅವತಾರದ ಕುರಿತಾಗಿಯೂ ಅನೇಕ ಪುರಾಣ ಕತೆಗಳು, ಜನಪದ ಕತೆಗಳು ಕೇಳಿಬರುತ್ತವೆ.
"ಶಿವನು ಭಿಕ್ಷಕ್ಕೆ ಬಂದ, ನೀಡು ನೀಡು ಬಾರೆ ತಂಗಿ" ಎಂಬ ಜನಪದ ಗೀತೆಯನ್ನು ನೀವೆಲ್ಲಾ ಕೇಳಿರಬಹುದು. ಶಿವ ತ್ರಿಮೂರ್ತಿಗಳಲ್ಲಿ ಒಬ್ಬ, ಹಾಗಾದರೆ ಅವನು ಭಿಕ್ಷೆ ಬೇಡುವ ಸ್ಥಿತಿ ಏಕೆ ಬಂತು, ಅನ್ನಪೂರ್ಣೇಶ್ವರಿಗೂ ಶಿವನ ಭಿಕ್ಷೆಗೂ ಎತ್ತಣ ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಶಿವನು ಭಿಕ್ಷೆ ಬೇಡಿದ್ದು ಹಾಗೂ ತಾಯಿ ಅನ್ನಪೂರ್ಣೆಯ ಅವತಾರಕ್ಕೂ ಖಂಡಿತವಾಗಿಯೂ ಸಂಬಂಧವಿದೆ.
"ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರಾಣ ವಲ್ಲಭೇ, ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ" – ಶಿವ ಲಯಕರ್ತ, ಅವನು ಈ ಪ್ರಾಪಂಚಿಕ ಸುಖವನ್ನು ಮೀರಿದವನು. ಒಂದು ಬಾರಿ ಹೀಗೇ ಪಾರ್ವತಿಗೂ ಶಿವನಿಗೂ ಪ್ರಾಪಂಚಿಕ ವಿಷಯಗಳ ಕುರಿತಾಗಿ ಚರ್ಚೆ ಶುರುವಾಗುತ್ತದೆ. ಶಿವ, ಅನ್ನ ಆಹಾರ ಸೇರಿದಂತೆ ಈ ಪ್ರಪಂಚದಲ್ಲಿರುವ ಎಲ್ಲವೂ ಮಾಯೆ ಎಂದು ಹೇಳಿದರೆ, ಪಾರ್ವತಿ ಆಹಾರ ಎಂಬುದು ಭ್ರಮೆ ಅಲ್ಲ ಎಂದು ಮಹಾದೇವನೊಂದಿಗೆ ವಾದಕ್ಕೆ ಇಳಿಯುತ್ತಾಳೆ. ಆದರೆ ಈಶ ಈ ವಾದವನ್ನು ಒಪ್ಪಿಕೊಳ್ಳುವುದೇ ಇಲ್ಲ. ಹೀಗಾಗಿ ಮಹಾದೇವಿ, ಶಂಕರನಿಗೆ ಆಹಾರ ಎಂಬುದು ಭ್ರಮೆ ಅಲ್ಲ ಎಂಬುದನ್ನು ಸಾಬೀತುಪಡಿಸಿ ತೋರಿಸುವುದಕ್ಕಾಗಿ ಕೈಲಾಸದಿಂದ ಕಣ್ಮರೆಯಾಗಿಬಿಡುತ್ತಾಳೆ. ಆಗ ಅವಳಿಂದ, ಅಂದರೆ ಆದಿಶಕ್ತಿಯಿಂದ ಸೃಷ್ಟಿಯಾಯಿತು ಎಂದು ಹೇಳಲಾಗುವ ಈ ಪ್ರಪಂಚದ ಸ್ಥಿತಿ-ಲಯಗಳಲ್ಲಿ ಏರುಪೇರಾಗತೊಡಗುತ್ತದೆ. ಪ್ರಕೃತಿ ಸ್ತಬ್ಧವಾಗಿಬಿಡುತ್ತದೆ. ಪರಿಣಾಮ, ಅನಾವೃಷ್ಟಿಯಿಂದಾಗಿ ಜಗತ್ತು ಕಂಗಾಲಾಗುತ್ತದೆ. ಬರಗಾಲದಿಂದ ಹಾಹಾಕಾರವೇಳುತ್ತದೆ. ಅನ್ನವಿಲ್ಲ, ನೀರಿಲ್ಲ, ಗಿಡಮರಗಳಲ್ಲಿ ಹಸಿರೇ ಇಲ್ಲ. ಜನರು ದಾರಿತೋಚದೆ ದೇವರ ಮೊರೆ ಹೋಗುತ್ತಾರೆ. ಆಗ ಶಿವ ಜಗನ್ಮಾತೆಯ ಮೊರೆ ಹೋಗಿ, ಆಹಾರ ಎಂಬುದು ಭ್ರಮೆ ಅಲ್ಲ ಎಂಬ ಪಾರ್ವತಿಯ ಮಾತಿಗೆ ಸಮ್ಮತಿಯನ್ನು ನೀಡುತ್ತಾನೆ. ಆ ಸಂದರ್ಭ ಮಹಾದೇವಿ ಅನ್ನಪೂರ್ಣೇಶ್ವರಿಯ ಅವತಾರವನ್ನು ನೀಡಿ ಶಿವ ಸೇರಿದಂತೆ ಜಗತ್ತಿನ ಹಸಿವನ್ನು ನೀಗಿಸುತ್ತಾಳೆ ಎಂಬುದು ಒಂದು ಪುರಾಣ ಕತೆ.
ಇನ್ನೊಂದು ಕತೆಯ ಪ್ರಕಾರ ಶಿವನನ್ನು ಬ್ರಹ್ಮಹತ್ಯಾ ದೋಷದಿಂದ ಮುಕ್ತಗೊಳಿಸುವುದಕ್ಕಾಗಿ ಪಾರ್ವತಿ ದೇವಿ ಅನ್ನಪೂರ್ಣೇಶ್ವರಿ ಸ್ವರೂಪವನ್ನು ಧಾರಣೆ ಮಾಡಿದ್ದಳು ಎಂದು ಹೇಳಲಾಗುತ್ತದೆ. ಮೂಲತಃ ಸೃಷ್ಟಿಕರ್ತ ಬ್ರಹ್ಮ ಪಂಚಮುಖಿ, ಅವನ ಅಹಂಕಾರದಿಂದ ಕೂಡಿದ ಐದನೇ ತಲೆಯನ್ನು ಭೈರವ ರೂಪಿಯಾಗಿ ಶಿವ ಸಂಹಾರ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಹಾಗೆ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದಾಗ ಆ ತಲೆ ಶಿವನ ಕೈಗೆ ಅಂಟಿಕೊಳ್ಳುತ್ತದೆ, ಹಾಗೆಯೇ ಅವನಿಗೆ ಬ್ರಹ್ಮಹತ್ಯಾ ದೋಷವೂ ತಗಲಿಬಿಡುತ್ತದೆ. ಕೈಗೆ ಬ್ರಹ್ಮನ ತಲೆ ಅಂಟಿಕೊಂಡ ಕಾರಣ ಅವನನ್ನು "ಕಪಾಲಿ" ಎಂದೂ ಕರೆಯಲಾಗುತ್ತದೆ. ಈ ದೋಷದಿಂದ ಮುಕ್ತನಾಗಲು ಶಿವ ಭಿಕ್ಷೆ ಬೇಡಬೇಕಾಗಿ ಬರುತ್ತದೆ. ಪುರಾಣ ಕತೆಗಳ ಪ್ರಕಾರ, ಕೈಗಂಟಿಕೊಂಡ ಕಪಾಲ ಸಂಪೂರ್ಣವಾಗಿ ಧಾನ್ಯ-ಆಹಾರಗಳಿಂದ ಕೂಡಿಕೊಳ್ಳದ ಹೊರತು ಶಿವನಿಗೆ ಶಾಪದಿಂದ ವಿಮೋಚನೆ ಸಿಗದು. ಎಷ್ಟು ಭಿಕ್ಷೆ ಬೇಡಿದರೂ ಶಿವನ ಕೈಗಂಟಿಕೊಂಡಿದ್ದ ಕಪಾಲ ತುಂಬದೇ ಹೋದಾಗ, ಚಿಂತಾಕ್ರಾಂತಳಾಗಿ ಹೋದ ಪಾರ್ವತಿ ದೇವಿಯೇ ಸಾಕ್ಷಾತ್ ಅನ್ನಪೂರ್ಣೇಶ್ವರಿ ರೂಪ ತಾಳಿ ಶಿವನಿಗೆ ಭಿಕ್ಷೆ ನೀಡಿ ಅವನ ಕೈಗೆ ಅಂಟಿಕೊಂಡಿದ್ದ ಕಪಾಲ ತುಂಬುವಂತೆ ಮಾಡಿದಳು. ಆ ಮೂಲಕ ಶಿವನನ್ನು ಶಾಪಮುಕ್ತನನ್ನಾಗಿಸಿದಳು ಪರಮೇಶ್ವರಿ ಎಂತಲೂ ಹೇಳಲಾಗುತ್ತದೆ. ಅಂತಹ ಅನ್ನಪೂರ್ಣೇಶ್ವರಿ ಹೊರನಾಡಿನಲ್ಲಿ ನೆಲೆನಿಂತು ಆ ಪರಿಸರವನ್ನು ಸಮೃದ್ಧವಾಗಿಸಿದ್ದಾಳೆ ಎಂದು ಇಲ್ಲಿನ ಸ್ಥಳ ಪುರಾಣಗಳು ಹೇಳುತ್ತವೆ.
ಇನ್ನು ಪದ್ಮಪೀಠ, ಕೂರ್ಮ ಹಾಗೂ ಅಷ್ಟಗಜಗಳನ್ನು ಒಳಗೊಂಡಿದೆ. ಹಾಗೇ ನಿಂತಿರುವ ಭಂಗಿಯಲ್ಲಿರುವ ಅನ್ನಪೂರ್ಣೆ ಚತುರ್ಭುಜೆ, ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಜಪಮಾಲೆ ಹಾಗೂ ಶ್ರೀಚಕ್ರಗಳನ್ನು ಹಿಡಿದಿದ್ದಾಳೆ. ವಿಗ್ರಹದ ಪಾದದಿಂದ ಶಿರದವರೆಗೆ ಸ್ವರ್ಣಾಲಂಕಾರವನ್ನು ಮಾಡಲಾಗಿದೆ.
ಹೊರನಾಡಿನ ಈ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಅನ್ನದಾಸೋಹ ನಿರಂತರವಾಗಿ ನಡೆಯುತ್ತದೆ. ಇನ್ನು ಇಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಅಭಿವೃದ್ಧಿ ಪಡಿಸಿರುವುದರಿಂದ ಹೊರನಾಡಿಗೆ ಭೇಟಿ ನೀಡುವುದು ಕಷ್ಟವಾಗುವುದಿಲ್ಲ. ಚಿಕ್ಕಮಗಳೂರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗದಿಂದ ರೈಲು ವ್ಯವಸ್ಥೆ ಇದೆ. ಪ್ರಮುಖ ನಗರಗಳಿಂದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ವ್ಯವಸ್ಥೆ ಕೂಡ ಇದೆ. ವಿಮಾನಯಾನ ಬಯಸುವವರು ಮಂಗಳೂರಿಗೆ (Mangalore Airport) ಬಂದು ಅಲ್ಲಿಂದ 126 ಕಿಲೋಮೀಟರ್ ದೂರದಲ್ಲಿರುವ ಹೊರನಾಡನ್ನು ತಲುಪಬಹುದು.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.