Nature & Wildlife

ಆಸ್ಟ್ರೇಲಿಯಾದ Rabbit Problem ಫುಲ್ Story..!

ಆಸ್ಟ್ರೇಲಿಯಾದ Rabbit Problem ಫುಲ್ Story..!
ಇದು ಮನುಷ್ಯನ ಹುಂಬತನಕ್ಕೆ ಪ್ರಕೃತಿ ಕೊಟ್ಟ ಭಯಾನಕ ಹೊಡೆತ. ತನ್ನ ಮೋಜಿಗಾಗಿ, ಪ್ರಾಣಿಗಳನ್ನು ಬೇಟೆಯಾಡುವ ಶೋಕಿಗಾಗಿ ಮಾಡಿಕೊಂಡ ಅದೊಂದು ಯಡವಟ್ಟು, ಇವತ್ತು ಆ ಇಡೀ ದೇಶವನ್ನು ಕಾಡುತ್ತಿದೆ, ದೊಡ್ಡ ಸಮಸ್ಯೆಯಾಗಿ ಬದಲಾಗಿಬಿಟ್ಟಿದೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ನಾವು ಅತ್ಯಂತ ಮುದ್ದಿನಿಂದ ನೋಡುವ ಮೊಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಪ್ರಕೃತಿಯ ಆಟವನ್ನು ಬಲ್ಲವರ್ಯಾರು? ಹಾಗಾದರೆ ಏನಿದು ಮೂಲ ಕಥೆ? ಇವುಗಳಿಂದ ಮನುಷ್ಯನಿಗೆ ಆಗುತ್ತಿರುವ ಸಮಸ್ಯೆಗಳೇನು? ಆ ಮೊಲಗಳಿಗೆ ಕಡಿವಾಣ ಹಾಕುವುದಕ್ಕೆ ಮಾನವ ನಡೆಸಿದ ಪ್ರಯತ್ನಗಳು ಹೇಗಿದ್ದವು? ಇಷ್ಟಾದರೂ ಅಲ್ಲಿ ಪ್ರಾಣಿಗಳೇ ಮನುಷ್ಯನ ವಿರುದ್ಧ ಗೆಲ್ಲುತ್ತಿರುವುದು ಹೇಗೆ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ
ಬ್ರಿಟಿಷರ ಕಾಲ ಮತ್ತು ಥಾಮಸ್ ಆಸ್ಟಿನ್‌ನ ಫಾರ್ಮ್ ಅದು 1859ರ ಸಮಯ. ಇಡೀ ಜಗತ್ತಿನಲ್ಲಿ ಬ್ರಿಟಿಷರ ಪಾರುಪತ್ಯ ನಡೆಯುತ್ತಿದ್ದ ಕಾಲ ಅದು. ಭಾರತದಲ್ಲೂ ಕೂಡ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಅಡಗಿಸಿ ಬ್ರಿಟಿಷರು ತಮ್ಮ ಪ್ರಾಬಲ್ಯವನ್ನು ಮೆರೆದಿದ್ದರು. ಹಾಗೆಯೇ ದಕ್ಷಿಣ ಆಫ್ರಿಕಾ ಸೇರಿದಂತೆ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಬ್ರಿಟಿಷರ ವಸಾಹತುಗಳಿದ್ದವು. ಅಂತಹ ಸಂದರ್ಭದಲ್ಲೇ ಬ್ರಿಟನ್‌ನಿಂದ ಬೇರೆ ಬೇರೆ ಕಡೆಗೆ ಬಂದು ನೆಲೆಸುವವರಿಗೆ ಬ್ರಿಟನ್ ಸರ್ಕಾರ ಸಾಕಷ್ಟು ಸಹಾಯ ಮಾಡುತ್ತಿತ್ತು. ಹೀಗಾಗಿ ಬಹಳಷ್ಟು ಮಂದಿ ಬ್ರಿಟನ್ ತೊರೆದು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ಬಂದು ನೆಲೆ ನಿಂತರು. ಹೀಗೆ ಬಂದವರ ಪೈಕಿ ಆಸ್ಟ್ರೇಲಿಯಾದಲ್ಲಿನ ಥಾಮಸ್ ಆಸ್ಟಿನ್ ಕೂಡ ಒಬ್ಬ. ಅವನು ಅದಾಗಲೇ ಆಸ್ಟ್ರೇಲಿಯಾಗೆ ಬಂದು ಬಹಳ ವರ್ಷಗಳಾಗಿದ್ದವು. ಹೀಗಾಗಿ ಅವನದ್ದೊಂದು ದೊಡ್ಡ ಫಾರ್ಮ್ ಕೂಡ ಇತ್ತು. ಅದಕ್ಕೆ ಅವನು ಬಾರ್ವನ್ ಪಾರ್ಕ್ (Barwon Park) ಎಂಬ ಹೆಸರನ್ನಿಟ್ಟಿದ್ದ. ಆ ಎಸ್ಟೇಟ್‌ನಲ್ಲಿ 1859ರ ಕ್ರಿಸ್‌ಮಸ್ ದಿನ ಅವನು ಹದಿಮೂರು ಮೊಲಗಳನ್ನು ಬಿಟ್ಟಿದ್ದ. ಕೆಲವರು ಹೇಳುವ ಹಾಗೆ ಅಲ್ಲಿ 24 ಮೊಲಗಳನ್ನು ಥಾಮಸ್ ಆಸ್ಟಿನ್ ರಿಲೀಸ್ ಮಾಡಿದ್ದ. ಅವುಗಳನ್ನು ಅವನು ಯುರೋಪ್‌ನಿಂದ ತರಿಸಿಕೊಂಡಿದ್ದ. ಸ್ಪೇನ್ ಹಾಗೂ ಪೋರ್ಚುಗಲ್ ಮೂಲದ ಯುರೋಪಿಯನ್ ರ್ಯಾಬಿಟ್ ಎಂದೇ ಕರೆಸಿಕೊಳ್ಳುತ್ತಿದ್ದ ಆ ಮೊಲಗಳನ್ನು ಯುರೋಪ್‌ನಲ್ಲಿ ಮಾಂಸಕ್ಕಾಗಿ ಸಾಕುಪ್ರಾಣಿಗಳನ್ನಾಗಿ ಹಾಗೂ ಬೇಟೆಗಾಗಿ ಬಳಸಲಾಗುತ್ತಿತ್ತು. ಸೋ, ಈ ಆಸ್ಟಿನ್‌ಗೂ ಕೂಡ ಬೇಟೆಯಾಡುವ ಹುಚ್ಚು. ಹಾಗಾಗಿ ಅವನು ತನ್ನ ಎಸ್ಟೇಟ್‌ನಲ್ಲಿ ಮೊಲಗಳನ್ನು ಬಿಟ್ಟ. ಆದರೆ ಆ ಮೊಲಗಳು ಆಸ್ಟ್ರೇಲಿಯಾಕ್ಕೆ ಹೊಸದಾಗಿದ್ದವು. ಇಷ್ಟಾದರೂ ಅವನು ಅಲ್ಲಿ ರಿಲೀಸ್ ಮಾಡಿದ್ದ ಮೊಲಗಳಲ್ಲಿ ಕೆಲವು ಅವನ ಬೇಟೆಯಿಂದ ತಪ್ಪಿಸಿಕೊಂಡವು. ಎಸ್ಟೇಟ್‌ನ ನಾನಾ ಕಡೆಗಳಲ್ಲಿ ಜೀವಿಸತೊಡಗಿದವು. ಅವತ್ತು ಆ ಆಸ್ಟಿನ್‌ಗೆ ವ್ಯಕ್ತಿಯೊಬ್ಬರು ಬೇಡ ಗುರು, ಇವೆಲ್ಲ ಮಾಡಬೇಡ, ಮುಂದೆ ಏನಾದರೂ ಸಮಸ್ಯೆಯಾಗುತ್ತದೆ ಎಂಬ ಸಲಹೆಯನ್ನು ಕೊಟ್ಟಿದ್ದರಂತೆ. ಆದರೆ ಆಸ್ಟಿನ್ ಅವತ್ತು ಎದೆಯುಬ್ಬಿಸಿ ಕೆಲವು ಮೊಲಗಳನ್ನು ಬಿಡುವುದರಿಂದ ಯಾವುದೇ ತೊಂದರೆಯೂ ಆಗುವುದಿಲ್ಲ ಎಂದು ಹೇಳಿದ್ದನಂತೆ. ಆದರೆ ಆ ನಂತರ ಅಲ್ಲಿ ನಡೆದದ್ದೇ ಬೇರೆ. 1859ರ ಕ್ರಿಸ್‌ಮಸ್ ಕಳೆದು 1960ರ ಕ್ರಿಸ್‌ಮಸ್ ಬರುವ ಹೊತ್ತಿಗೆ ಆಸ್ಟ್ರೇಲಿಯಾದಲ್ಲಿ ಸಹಸ್ರಾರು ಮೊಲಗಳು ಕಂಡುಬಂದವು. ಅದರಲ್ಲೂ ಇವನ ಎಸ್ಟೇಟ್‌ನಲ್ಲೇ ಭಾರಿ ಸಂಖ್ಯೆಯ ಮೊಲಗಳು ಕಂಡವು. ನೋಡನೋಡುತ್ತಿದ್ದಂತೆ ಅವುಗಳ ಸಂಖ್ಯೆ ಲಕ್ಷವನ್ನು ದಾಟಿತ್ತು. ಅವು ಕೋಟಿಗಳನ್ನು ದಾಟಿ, ಹತ್ತಾರು ಕೋಟಿಗಳಷ್ಟಾದವು. ಅಲ್ಲಿಗೆ ಆಸ್ಟ್ರೇಲಿಯಾದವರಿಗೆ ಮೊಲಗಳಿಂದ ಕಾಟ ಶುರುವಾಯಿತು.
ಪರಿಸರ ಸಮತೋಲನ ಕದಡಿದ ಪರಿಣಾಮ ಯಾವುದೇ ಪ್ರಭೇದದ ಪ್ರಾಣಿ ಹೆಚ್ಚಾದರೂ ಕೂಡ ಅಲ್ಲಿ ಸಮಸ್ಯೆಯೇ. ಹೀಗಾಗಿಯೇ ಕಾಡಿನಲ್ಲಿ ಸಮತೋಲನ ಕಾಣಬೇಕೆಂದರೆ ಅಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಅಗತ್ಯವಿರುವಷ್ಟು ಮಾಂಸಾಹಾರಿ ಪ್ರಾಣಿಗಳು ಇರಬೇಕು. ಆಗಷ್ಟೇ ಅಲ್ಲಿ ಜೀವ ವೈವಿಧ್ಯ ಚೆನ್ನಾಗಿರುತ್ತದೆ. ಇಲ್ಲದೇ ಹೋದರೆ ಆಸ್ಟ್ರೇಲಿಯಾದ ಗತಿ ಎಲ್ಲ ದೇಶಗಳಿಗೂ ಬರುತ್ತದೆ. ಯಾಕೆಂದರೆ ಅವತ್ತು ಆಸ್ಟ್ರೇಲಿಯಾದಲ್ಲಿ ಮೊಲಗಳು ರಿಲೀಸ್ ಆದಾಗ ಅವುಗಳನ್ನು ಭಕ್ಷಿಸುವುದಕ್ಕೆ ಪರಭಕ್ಷಕಗಳು ಕಡಿಮೆ ಇದ್ದವು. ಹೀಗಾಗಿ ಮೊಲಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಒಂದೊಂದು ಮೊಲಗಳೂ ಕೆಲವೇ ತಿಂಗಳುಗಳಲ್ಲಿ ಮರಿಗಳನ್ನು ಹಾಕುತ್ತಿದ್ದವು. ಆ ಮರಿಗಳು ಇನ್ನೂ ಕೆಲವು ತಿಂಗಳುಗಳಲ್ಲಿ ಇನ್ನಷ್ಟು ಮರಿಗಳನ್ನು ಹಾಕುತ್ತಿದ್ದವು. ಹೀಗಾಗಿಯೇ ಆಸ್ಟ್ರೇಲಿಯಾದ ತುಂಬೆಲ್ಲ ಮೊಲಗಳು ಹರಡಿಕೊಂಡುಬಿಟ್ಟವು, ಅದೂ ಕೋಟ್ಯಂತರ ಸಂಖ್ಯೆಯಲ್ಲಿ.
ಆಹಾರ ಅಭಾವ, ಮಣ್ಣಿನ ಸವಕಳಿ ಮತ್ತು ಆರ್ಥಿಕ ನಷ್ಟ ಮೊದಲಿಗೆ ಅಲ್ಲಿನ ಜನ ಮೊಲಗಳನ್ನು ಹಿಡಿಯುವುದು, ಅದರ ಮಾಂಸವನ್ನು ಸಂಗ್ರಹಿಸುವುದು, ಮೊಲದ ಚರ್ಮದಿಂದ ಹ್ಯಾಟ್‌ಗಳನ್ನು ಮಾಡಿ ಅದನ್ನು ಬ್ರಿಟನ್‌ಗೆ ಕಳುಹಿಸುವ ಕೆಲಸವನ್ನು ಮಾಡುವುದಕ್ಕೆ ಶುರುಮಾಡಿದರು. ಆದರೆ ಅಲ್ಲಿ ಮೊಲಗಳ ಸಂಖ್ಯೆ ವಿಪರೀತವಾಗಿ ಹೆಚ್ಚಾದಾಗ ಜನ ಕಂಗೆಟ್ಟರು. ಯಾಕೆಂದರೆ ಮೊಲಗಳಿಗೆ ತಿನ್ನುವುದಕ್ಕೆ ಆಹಾರ ಬೇಕಿತ್ತು. ಅವುಗಳಿಗೆ ಹಸಿರಾಗಿ ಏನೆಲ್ಲಾ ಕಾಣುತ್ತಿತ್ತೋ ಅದೆಲ್ಲವನ್ನೂ ತಿನ್ನುವುದಕ್ಕೆ ಶುರುಮಾಡಿದವು. ಆ ಗಿಡಗಳ ಬೇರುಗಳನ್ನೂ ಕೂಡ ಮೊಲಗಳು ಬಿಡುತ್ತಿರಲಿಲ್ಲ. ಹೀಗಾಗಿಯೇ ಆಸ್ಟ್ರೇಲಿಯಾದಲ್ಲಿ ಕೃಷಿ ಮಾಡುವವರಿಗೆ ಬೆಳೆ ಕೈಗೆ ಹತ್ತಲಿಲ್ಲ. ಅಲ್ಲಿ ಆಹಾರದ ಅಭಾವ ಕಂಡುಬಂತು. ಹಸಿರು ನಾಶವಾಯಿತು. ಎಲ್ಲೂ ಕೂಡ ಹುಲ್ಲು, ಗಿಡಮರಗಳು ಕಾಣದಂತಾದವು. ಹೀಗೆ ಗಿಡಗಳು ಹಾಗೂ ಹುಲ್ಲುಗಾವಲು ನಾಶವಾದ ಕಾರಣದಿಂದ ಭೂಮಿಯ ಮೇಲಿನ ಹೊದಿಕೆ ಇಲ್ಲದಂತಾಯಿತು. ಗಾಳಿ ಹಾಗೂ ಮಳೆಯ ಕಾರಣದಿಂದ ಅಲ್ಲಿ ಮಣ್ಣಿನ ಸವಕಳಿ ಆರಂಭವಾಯಿತು. ಇದರ ಜೊತೆಗೆ ನೀರಿನ ಮಟ್ಟ ಕೂಡ ಕುಸಿಯಿತು. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಹಸಿರೇ ಕಾಣದೇ ಕೆಂಪು ನೆಲವನ್ನು ನೋಡಿದ ಅನುಭವವಾಗುತ್ತಿತ್ತು. ಇನ್ನು ಈ ಮೊಲಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅವು ಸ್ಥಳೀಯ ಸ್ತನಿ ಪ್ರಾಣಿಗಳ ಜೊತೆ ಆಹಾರಕ್ಕಾಗಿ ಪೈಪೋಟಿಗೆ ಬಿದ್ದವು. ಇದರ ಪರಿಣಾಮ ಆಸ್ಟ್ರೇಲಿಯಾದಲ್ಲಿದ್ದ ಪಕ್ಷಿಗಳಿಗೂ ಕೂಡ ಆಹಾರ ಸಿಗದಂತಾಗಿಬಿಟ್ಟಿತ್ತು. ಇನ್ನು ಕೃಷಿಯ ಕಥೆಯನ್ನು ಹೇಳುವುದೇ ಬೇಡ, ಅವತ್ತಿಗಾಗಲೇ ಅಲ್ಲಿ ಈ ಮೊಲಗಳ ಕಾರಣದಿಂದ ಬಿಲಿಯನ್ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಅಲ್ಲಿ ಮೊಲಗಳನ್ನು ತಡೆಯುವುದಕ್ಕೆ ಏನು ಮಾಡಿದರೂ ಸಾಧ್ಯವಾಗಲಿಲ್ಲ. ರೈತರು ಬಂದೂಕುಗಳನ್ನು ತೆಗೆದುಕೊಂಡು ಮೊಲಗಳನ್ನು ಕೊಂದರು, ವಿಷವಿಟ್ಟರು. ಊಹೂಂ, ಅದ್ಯಾವುದೂ ಕೆಲಸಕ್ಕೆ ಬರಲೇ ಇಲ್ಲ. ಹೀಗಾಗಿಯೇ ಮೊಲಗಳನ್ನು ತಡೆಯುವ ನಿಟ್ಟಿನಲ್ಲಿ ಪಶ್ಚಿಮ ಆಸ್ಟ್ರೇಲಿಯಾದಲ್ಲಿ 1901–1907ರ ನಡುವೆ ದೊಡ್ಡ ಬೇಲಿಯನ್ನು ನಿರ್ಮಿಸಲಾಯಿತು. ಆ ಬೇಲಿಯನ್ನು ರ‍್ಯಾಬಿಟ್-ಪ್ರೂಫ್ ಫೆನ್ಸ್ (Rabbit-Proof Fence) ಎಂದು ಕರೆಯಲಾಯಿತು. ಅದು ಸುಮಾರು 3,256 ಕಿಲೋಮೀಟರ್ಗಳಷ್ಟು ಉದ್ದವಿತ್ತು. ಇಷ್ಟಾದರೂ ಅಲ್ಲಿ ಮೊಲಗಳ ಕಾಟ ತಪ್ಪಲಿಲ್ಲ. ಹೀಗಾಗಿ ಜನ ಬೇಸತ್ತು ಹೋದರು. ಅದು ಅಲ್ಲಿನ ಸರ್ಕಾರಕ್ಕೂ ತಲೆನೋವನ್ನು ತಂದಿತು. ಹೀಗೆ 1920ರ ಹೊತ್ತಿಗೆ ಆಸ್ಟ್ರೇಲಿಯಾದಲ್ಲಿ ಮೊಲಗಳ ಕಾಟ ಎಷ್ಟಿತ್ತೆಂದರೆ, ಅವುಗಳನ್ನು ಜಗತ್ತಿನ ಅತ್ಯಂತ ಅಪಾಯಕಾರಿ ಜೀವಿಗಳು ಎಂದು ಆಸ್ಟ್ರೇಲಿಯಾದ ಜನ ಕರೆಯುವುದಕ್ಕೆ ಶುರುಮಾಡಿದರು. ಹೀಗಾಗಿ ಅಲ್ಲಿನ ಸರ್ಕಾರ ಇವುಗಳನ್ನು ಏನಾದರೂ ಮಾಡಿ ನಿಯಂತ್ರಿಸಬೇಕೆಂದು ಪ್ರಯತ್ನಪಟ್ಟಿತು. ಹೀಗಾಗಿ ಅವರು ಜೈವಿಕ ವಿಜ್ಞಾನಿಗಳ ಮೊರೆ ಹೋದರು. ಕೋಟ್ಯಂತರ ಸಂಖ್ಯೆಯಲ್ಲಿರುವ ಮೊಲಗಳನ್ನು ನಿರ್ನಾಮ ಮಾಡುವುದು ಅಲ್ಲಿ ಸುಲಭದ ಮಾತಾಗಿರಲಿಲ್ಲ. ಅವುಗಳನ್ನು ಬೇಟೆಯಾಡಿ ಕೊಲ್ಲುವುದು ಅಸಾಧ್ಯವಾಗಿತ್ತು. ಒಂದೋ ಮೊಲಗಳು ಉಳಿಯಬೇಕು, ಅಥವಾ ಜನ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಿತು. ಸೋ, 1950ರ ಹೊತ್ತಿಗೆ ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡ ಈ ಮೊಲಗಳನ್ನು ನಾಶ ಮಾಡುವ ಪ್ರಯತ್ನದಲ್ಲಿ ಯಶಸ್ಸು ಪಡೆದರು. ಅಲ್ಲಿ ಅವರ ನೆರವಿಗೆ ನಿಂತಿದ್ದು ದಕ್ಷಿಣ ಅಮೆರಿಕಾ ಮೂಲದ ಮೈಕ್ಸೊಮಟೋಸಿಸ್ (Myxomatosis) ವೈರಾಣು.
ವೈರಾಣು ಪ್ರಯೋಗಗಳು: ಮೈಕ್ಸೊಮಟೋಸಿಸ್ ಗೆಳೆಯರೇ, ಅದೊಂದು ಮಹತ್ವದ ಹೆಜ್ಜೆಯಾಗಿತ್ತು. ಒಂದು ವೇಳೆ ಅಲ್ಲಿ ಆ ವೈರಾಣುವಿಗೂ ಮೊಲಗಳು ಜಗ್ಗದೇ ಇದ್ದರೆ ಮುಂದೇನು ಎಂಬ ಆಲೋಚನೆ ಅಲ್ಲಿನ ವಿಜ್ಞಾನಿಗಳಲ್ಲಿ ಇತ್ತು. ಹೀಗಾಗಿಯೇ ಅವರು ಮಾಡು ಇಲ್ಲವೇ ಮಡಿ ಎಂಬ ರೀತಿ ಈ ಮೈಕ್ಸೊಮಟೋಸಿಸ್ ವೈರಾಣುವನ್ನು ಬಳಸುವುದಕ್ಕೆ ನಿಂತರು. ಮೊದಲಿಗೆ ಒಂದಷ್ಟು ಮೊಲಗಳ ಮೇಲೆ ಅದರ ಪರಿಣಾಮವನ್ನು ಗಮನಿಸಲಾಯಿತು. ಅಲ್ಲಿ ವೈರಾಣು ಮೊಲಗಳನ್ನು ಕೊಲ್ಲುವುದರಲ್ಲಿ ಯಶಸ್ವಿಯಾಯಿತು. ಹೀಗಾಗಿಯೇ ಮತ್ತಷ್ಟು ಮೊಲಗಳಿಗೆ ಆ ವೈರಾಣುವನ್ನು ಇಂಜೆಕ್ಟ್ ಮಾಡಿ ಅವುಗಳನ್ನು ಫೀಲ್ಡ್‌ಗೆ ಬಿಡಲಾಯಿತು. ಈ ಹೊತ್ತಿನಲ್ಲಿ ವೈರಾಣು ದಾಳಿಗೆ ತುತ್ತಾದ ಮೊಲಗಳನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತ ಮೊಲಗಳಿಗೆ ಕಚ್ಚಿದಾಗ ಆ ವೈರಾಣು ಅವುಗಳಿಗೂ ಹರಡುತ್ತಿತ್ತು. ಹೀಗಾಗಿ ನೋಡನೋಡುತ್ತಿದ್ದಂತೆ ಕೆಲವೇ ತಿಂಗಳುಗಳಲ್ಲಿ ಶೇಕಡಾ 90 ರಿಂದ 99ರಷ್ಟು ಮೊಲಗಳ ನಿರ್ನಾಮವಾಗಿ ಹೋಯಿತು. ಅಲ್ಲಿ ಸತ್ತ ಮೊಲಗಳನ್ನು ರೈತರು ತಮ್ಮ ಜಮೀನಿನಲ್ಲೇ ಸುಟ್ಟುಹಾಕುತ್ತಿದ್ದರು. ಕೆಲ ವರ್ಷಗಳ ಕಾಲ ಮೊಲಗಳ ಕಾಟ ಕಡಿಮೆಯಾಗಿದ್ದರಿಂದ ರೈತರು ಖುಷಿಯಾದರು. ಅಲ್ಲಿನ ನೆಲದಲ್ಲಿ ಮತ್ತೆ ಹಸಿರು ಕಾಣಿಸಿಕೊಂಡಿತು. ಆದರೆ ವರ್ಷಗಳು ಉರುಳಿದಂತೆ ಆ ವೈರಾಣುಗಳಿಗೆ ಮೊಲಗಳೂ ಹೊಂದಿಕೊಂಡುಬಿಟ್ಟವು (acclimatize). ಹೀಗಾಗಿ ಆ ಮೈಕ್ಸೊಮ ವೈರಾಣು ಮೊಲಗಳನ್ನು ಕೊಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಅಷ್ಟಾಗುತ್ತಿದ್ದಂತೆ ಕೆಲವೇ ವರ್ಷಗಳಲ್ಲಿ ಮತ್ತೆ ಮೊಲಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅಲ್ಲಿ ಸೇಮ್ ಪ್ರೊಸೆಸ್. ಹೀಗಾಗಿ ಮತ್ತೆ ಆಸ್ಟ್ರೇಲಿಯಾದಲ್ಲಿ ಮೊಲಗಳ ಸಂಖ್ಯೆ ಹೆಚ್ಚಾಯಿತು. ಆಗ ವಿಜ್ಞಾನಿಗಳು ಮತ್ತೊಂದು ವೈರಾಣುವನ್ನು ಈ ಮೊಲಗಳ ವಿರುದ್ಧ ಬಳಸುವುದಕ್ಕೆ ನಿಂತರು. ಆ ಎರಡನೇ ವೈರಾಣುವಿನ ಹೆಸರು ಕ್ಯಾಲಿಸಿ ವೈರಾಣು (Calicivirus).
ಕ್ಯಾಲಿಸಿ ವೈರಾಣು ಮತ್ತು ಮೊಲಗಳ ಪ್ರತಿರೋಧ ಶಕ್ತಿ ಈ ಕ್ಯಾಲಿಸಿ ವೈರಾಣುವನ್ನು 1960ರ ದಶಕದಲ್ಲಿ ಆಸ್ಟ್ರೇಲಿಯಾದಲ್ಲಿ ವಿಜ್ಞಾನಿಗಳು ಮೊಲಗಳ ಮೇಲೆ ಪ್ರಯೋಗ ಮಾಡಿದರು. ಇದರಿಂದ ಮೊಲಗಳು ರಕ್ತಸ್ರಾವವಾಗಿ ಸಾವನ್ನಪ್ಪಿದವು. ಅಲ್ಲೂ ಕೂಡ ಶೇಕಡಾ 99ರಷ್ಟು ಮೊಲಗಳು ನಾಶವಾಗಿದ್ದವು. ಆದರೆ ಆ ಬಳಿಕ ಕೆಲ ತಿಂಗಳುಗಳಲ್ಲೇ ಆ ವೈರಾಣುವಿಗೂ ಮೊಲಗಳ ಒಳಗೆ ಪ್ರತಿರೋಧಕಗಳು ಸೃಷ್ಟಿಯಾದವು. ಹೀಗಾಗಿಯೇ ಅಲ್ಲಿ ಮತ್ತೆ ಮೊಲಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಸೋ, ಅಲ್ಲಿ ಮನುಷ್ಯನಿಗೆ ಅರ್ಥವಾಗಿದ್ದೇನೆಂದರೆ, ಈ ಮೊಲಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಕ್ಕೆ ಸಧ್ಯಕ್ಕೆ ಸಾಧ್ಯವಿಲ್ಲ ಎನ್ನುವುದು. ಹೇಗೆ 1859ರಲ್ಲಿ ಕೇವಲ 13 ಮೊಲಗಳು ಇವತ್ತು ಕೋಟ್ಯಂತರ ಮೊಲಗಳಾಗಿ ಬದಲಾಗಿವೆಯೋ, ಅಂತೆಯೇ ಕೋಟಿ ಮೊಲಗಳಲ್ಲಿ ಒಂದು ಪರ್ಸೆಂಟ್ ಎಂದರೂ ಒಂದು ಲಕ್ಷ ಮೊಲಗಳು ಉಳಿಯುತ್ತವೆ. ಸೋ, ಒಂದು ಲಕ್ಷ ಮೊಲಗಳು ಎಷ್ಟು ಬೇಗ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದಲ್ಲವಾ? ಇವತ್ತಿಗೂ ಆಸ್ಟ್ರೇಲಿಯಾದ ಸುಮಾರು 70% ಭೂಭಾಗದಲ್ಲಿ ಕಾಡುಮೊಲಗಳು ಕಂಡುಬರುತ್ತವೆ. ಸರ್ಕಾರ ಅವುಗಳನ್ನು ನಿಯಂತ್ರಿಸುವುದಕ್ಕೆ ವಿಷದ ಬಲೆಗಳನ್ನು, ವೈರಾಣುಗಳನ್ನು, ಅವುಗಳ ಆವಾಸವನ್ನು ನಾಶ ಮಾಡುವುದನ್ನು ಪ್ರಯತ್ನಿಸುತ್ತಲೇ ಇದೆ. ಆದರೆ ಅಲ್ಲಿ ಅವರಿಗೆ ಸಂಪೂರ್ಣ ಯಶಸ್ಸು ಸಿಗುತ್ತಿಲ್ಲ.
1788ರಿಂದಲೇ ಇದ್ದ ಮೊಲಗಳು: ಎಲ್ಲಿ ತಪ್ಪಾಯಿತು? ಹಾಗೆ ನೋಡಿದರೆ 1859ಕ್ಕೂ ಮುನ್ನವೇ, ಅಂದರೆ 1788ರಲ್ಲೇ ಬ್ರಿಟಿಷರು ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಬಂದಾಗಲೇ ಈ ಮೊಲಗಳನ್ನು ತಂದಿದ್ದರು. ಆದರೆ ಅವುಗಳನ್ನು ಮನೆಯಲ್ಲಿಟ್ಟು ಸಾಕುತ್ತಿದ್ದರು. ಅವುಗಳ ಸಂಖ್ಯೆ ಹೆಚ್ಚಾದಾಗ ಆಹಾರಕ್ಕಾಗಿ ಬಳಸುತ್ತಿದ್ದರು. ಬಟ್, ಅವುಗಳನ್ನು ಜಮೀನಿಗೆ ಬಿಟ್ಟಿರಲಿಲ್ಲ. ಹೀಗಾಗಿ ಸರಿಸುಮಾರು ಏಳು ದಶಕಗಳ ಕಾಲ ಅಲ್ಲಿ ಮೊಲಗಳಿಂದ ಸಮಸ್ಯೆಗಳಾಗಿರಲಿಲ್ಲ. ಆದರೆ 1859ರಲ್ಲಿ ಥಾಮಸ್ ಆಸ್ಟಿನ್ ಮಾಡಿದ ಅದೊಂದು ತಪ್ಪು ಆಸ್ಟ್ರೇಲಿಯಾವನ್ನು ಇನ್ನಿಲ್ಲದಂತೆ ಕಾಡಿಬಿಟ್ಟಿದೆ.
ಆಸ್ಟ್ರೇಲಿಯಾದ ಇತರ ಜೀವಿ ಸಂಕಷ್ಟಗಳು: ಎಮು ಮತ್ತು ಕಾಂಗರೂ ಹಾಗೆಯೇ ಕಾಂಗರೂಗಳ ಕತೆ ಕೂಡ. ಅಲ್ಲಿ ಕಾಂಗರೂಗಳು ಕೂಡ ಜನರಿಗೆ ಸಾಕಷ್ಟು ಕಾಟ ಕೊಡುತ್ತಿವೆ. ಸೋ, ಆಸ್ಟ್ರೇಲಿಯಾ ಎಂಬುದು ಸ್ಥಳೀಯ ಜೀವಿಗಳು ಹಾಗೂ ಹೊರಜೀವಿಗಳ ಆಟದಿಂದ ನಲುಗುತ್ತಿದೆ. ಅವತ್ತು ಸ್ಥಳೀಯವಲ್ಲದ ಮೊಲಗಳನ್ನು ತಂದು ಬಿಡುವುದರ ಮೂಲಕ ಮನುಷ್ಯ ದೊಡ್ಡ ತಪ್ಪನ್ನು ಮಾಡಿದ್ದ. ಅದೇ ಈಗ ಅವನ ಕುಲಕ್ಕೆ ಶಾಪವಾಗಿ ಕಾಡುತ್ತಿದೆ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.