ಮಹಾಭಾರತ (Mahabharata)ದಲ್ಲಿ ಕೇಳಿ ಬರುವ ಅದ್ಭುತ ಪಾತ್ರ ಭೀಮ (Bheema)ನದ್ದು. ಅವನ ಹುಟ್ಟಿನಿಂದ ಹಿಡಿದು ಸಾವಿನವರೆಗೂ ಭೀಮ ತಿಂಡಿಪೋತನಾಗಿ, ಬಲಶಾಲಿಯಾಗಿ, ರುದ್ರನ ಅಪರಾವತಾರವಾಗಿ ಕಾಣಿಸಿಕೊಳ್ಳುತ್ತಾನೆ. ಅಂತಹ ಭೀಮನಿಗೆ ಹತ್ತು ಸಾವಿರ ಆನೆಗಳ ಬಲ ಇತ್ತು ಎಂದು ಹೇಳಲಾಗುತ್ತದೆ. ಹಾಗಾದರೆ ಅದು ನಿಜವೇ? ಹತ್ತು ಸಾವಿರ ಆನೆಗಳ ಬಲವನ್ನು ಭೀಮ ಪಡೆದದ್ದಾದರೂ ಹೇಗೆ.
ಭೀಮ ಹುಟ್ಟಿದಾಗಲೇ ಕುಂತಿ ಮತ್ತು ಪಾಂಡುವಿಗೆ ಇವನು ಅಸಾಮಾನ್ಯ ಎಂದು ಗೊತ್ತಾಗಿತ್ತಂತೆ. ಒಮ್ಮೆ ಮಗು ಭೀಮ ತಾಯಿ ಕುಂತಿಯ ಕೈಯಿಂದ ಜಾರಿ ಪ್ರಪಾತಕ್ಕೆ ಬಿದ್ದುಬಿಟ್ಟನಂತೆ. ಆದರೆ ಅವನಿಗೆ ಏನೂ ಆಗಿರಲಿಲ್ಲ, ಬದಲಿಗೆ ಅವನು ಬಿದ್ದ ರಭಸಕ್ಕೆ ಕಲ್ಲುಬಂಡೆಗಳೇ ಪುಡಿಗಟ್ಟಿ ಹೋಗಿದ್ದವಂತೆ. ತಿನ್ನುವ ವಿಚಾರದಲ್ಲೂ ಭೀಮ ಮುಂದು - ಕುಂತಿ ಮಾಡಿದ ಅಡುಗೆಯಲ್ಲಿ ಅರ್ಧ ಭಾಗವನ್ನು ಭೀಮನಿಗೇ ಎತ್ತಿಡುತ್ತಿದ್ದಳಂತೆ.
ಹಸ್ತಿನಾಪುರಕ್ಕೆ ಬಂದ ನಂತರ ಭೀಮ ದುರ್ಯೋಧನಾದಿಗಳನ್ನು ಸಾಕಷ್ಟು ಕಾಡುತ್ತಾನೆ, ಇದರಿಂದ ದುರ್ಯೋಧನ ಮತ್ತು ಅವನ ತಮ್ಮ ದುಶ್ಯಾಸನನಿಗೆ ಭೀಮನ ಮೇಲೆ ಇನ್ನಿಲ್ಲದ ದ್ವೇಷ ಹುಟ್ಟುತ್ತದೆ. ಭೀಮನ ಕಾಟ ತಡೆಯಲಾಗದ ದುರ್ಯೋಧನ, ಮಾವ ಶಕುನಿಯ ಸಹಾಯದಿಂದ ಭೀಮನಿಗೆ ಪಾಯಸದಲ್ಲಿ ವಿಷ ಬೆರೆಸಿ ಕೊಡುತ್ತಾನೆ. ಪ್ರಜ್ಞೆ ತಪ್ಪಿದ ಭೀಮನ ಕೈಗಳನ್ನು ಕಟ್ಟಿ, ಅವನನ್ನು ಗಂಗಾ ನದಿಗೆ ಎಸೆದುಬಿಡುತ್ತಾನೆ.
ಪ್ರಜ್ಞೆ ತಪ್ಪಿದ ಭೀಮ ಗಂಗಾನದಿಯ ಮೂಲಕ ಸರ್ಪಲೋಕವನ್ನು ತಲುಪುತ್ತಾನೆ. ಅಲ್ಲಿ ಹಾವುಗಳು ಅವನನ್ನು ಕಚ್ಚುತ್ತವೆ, ಆದರೆ ಅವುಗಳ ವಿಷ ಈಗಾಗಲೇ ಅವನ ಮೈಯಲ್ಲಿದ್ದ ವಿಷದ ವಿರುದ್ಧ ಕೆಲಸ ಮಾಡುತ್ತದೆ. ಇದರಿಂದ ಭೀಮ ಎಚ್ಚರಗೊಂಡು ಹಾವುಗಳನ್ನು ಬಡಿಯತೊಡಗುತ್ತಾನೆ. ಈ ವಿಚಾರ ಸರ್ಪಲೋಕದ ರಾಜ ವಾಸುಕಿಗೆ ಗೊತ್ತಾಗುತ್ತದೆ. ಭೀಮ ಯಾರೆಂದು ಅರಿತ ವಾಸುಕಿ ಅವನನ್ನು ಸ್ವಾಗತಿಸಿ, ಶಕ್ತಿಶಾಲಿ ಔಷಧವೊಂದನ್ನು ನೀಡುತ್ತಾನೆ. ಅದನ್ನು ಕುಡಿದ ಭೀಮನ ಮೈಯಲ್ಲಿದ್ದ ವಿಷ ನಾಶವಾಗುತ್ತದೆ, ಜೊತೆಗೆ ಅವನಿಗೆ ಹತ್ತು ಸಾವಿರ ಆನೆಗಳ ಬಲ ಪ್ರಾಪ್ತಿಯಾಗುತ್ತದೆ. ಆ ನಂತರ ವಾಸುಕಿ ಭೀಮನನ್ನು ಗಂಗಾ ನದಿಯ ದಂಡೆಗೆ ಮರಳಿ ಕರೆತರುತ್ತಾನೆ.
ಈ ವಿಚಾರ ಗೊತ್ತಿಲ್ಲದ ದುರ್ಯೋಧನ ಖುಷಿಯಾಗಿರುತ್ತಾನೆ. ಆದರೆ ಭೀಮ ಮತ್ತೆ ಹಸ್ತಿನಾಪುರಕ್ಕೆ ಮರಳಿದ್ದನ್ನು ಕಂಡು ದುರ್ಯೋಧನನಿಗೆ ವೈರತ್ವ ಮತ್ತಷ್ಟು ಹೆಚ್ಚಾಗುತ್ತದೆ. ಹತ್ತು ಸಾವಿರ ಆನೆಗಳ ಬಲ ಪಡೆದ ಭೀಮ ದುರ್ಯೋಧನಾದಿಗಳನ್ನು ಇನ್ನಷ್ಟು ಕಾಡುವುದಕ್ಕೆ ಶುರುಮಾಡುತ್ತಾನೆ. ಈ ಅಪೂರ್ವ ವರ ಭೀಮನಿಗೆ ತನ್ನಂತೆಯೇ ಸಮಬಲರಾಗಿದ್ದ ಇನ್ನೂ ನಾಲ್ವರನ್ನು ಮಣಿಸುವುದಕ್ಕೂ ಸಹಾಯ ಮಾಡಿತ್ತು ಎಂದು ಹೇಳಲಾಗುತ್ತದೆ.
ಭೀಮ: ಹತ್ತು ಸಾವಿರ ಆನೆಗಳ ಬಲ ಪಡೆದ ಕಥೆ.! The story of Bheema.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.