Bharata

ಭಾರತದ ಭಯಾನಕ ಮಿಸೈಲ್ ಯಶಸ್ವಿ: Facts about Agni-5 MIRV.!

ಭಾರತದ ಭಯಾನಕ ಮಿಸೈಲ್ ಯಶಸ್ವಿ: Facts about Agni-5 MIRV.!
ಭಾರತ ಮಿಸೈಲ್ ಶಕ್ತಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಈಗಾಗಲೇ ಜಾಗತಿಕವಾಗಿ ಸೂಪರ್‌ಸಾನಿಕ್ (Supersonic), ಹೈಪರ್‌ಸಾನಿಕ್ (Hypersonic) ಹಾಗೂ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM)ಗಳನ್ನು ಹೊಂದಿರುವ ಭಾರತ, ಶಾರ್ಟ್ ರೇಂಜ್, ಲಾಂಗ್ ರೇಂಜ್ ಹಾಗೂ ಮಿಡಿಯಂ ರೇಂಜ್ ಕ್ಷಿಪಣಿಗಳನ್ನೂ ಹೊಂದಿದೆ. ಈ ಸಂದರ್ಭದಲ್ಲಿ ಭಾರತ ಈಗ ಎಂಐಆರ್‌ವಿ (MIRV) ತಂತ್ರಜ್ಞಾನವನ್ನು ಅಗ್ನಿ-5 ಕ್ಷಿಪಣಿಗೆ ಅಳವಡಿಸಿ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯಲ್ಲಿ ಯಶಸ್ಸು ಸಿಕ್ಕಿದ್ದು, ಜಗತ್ತಿನಲ್ಲಿ ಕೆಲವೇ ಕೆಲವು ದೇಶಗಳು ಸೇರಿರುವ ಎಲೈಟ್ ಕ್ಲಬ್‌ಗೆ ಭಾರತವೂ ಸೇರ್ಪಡೆಯಾಗಿದೆ. ಮೇ 8ರಂದು ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಮಹತ್ವದ ಪರೀಕ್ಷೆಯೊಂದು ನಡೆಯಿತು. ಒಂದೇ ಕ್ಷಿಪಣಿಗೆ ಬಹು ಪೇಲೋಡ್‌ಗಳನ್ನು (Multiple Payload) ಅಳವಡಿಸಿ, ಬೇರೆ ಬೇರೆ ಗುರಿಗಳನ್ನು ಗುರಿಯಾಗಿಸಿಕೊಳ್ಳಲಾಯಿತು. ಹಿಂದೂ ಮಹಾಸಾಗರದಲ್ಲಿ ನಡೆದ ಈ ಅದ್ಭುತ ಪರೀಕ್ಷೆಯಲ್ಲಿ ಭಾರತ ಭರ್ಜರಿ ಯಶಸ್ಸು ಗಳಿಸಿಕೊಂಡಿದೆ. ಬಹು ಪೇಲೋಡ್‌ಗಳನ್ನು ಹೊತ್ತು, ಬೇರೆ ಬೇರೆ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಿದ್ದು ಅಗ್ನಿ-5 ಎಂಐಆರ್‌ವಿ (Agni-5 MIRV). ಈ ಅಗ್ನಿ ಸರಣಿಯ ಕ್ಷಿಪಣಿಗಳು ಭಾರತದ ಬಹುದೊಡ್ಡ ಶಕ್ತಿ ಎಂದೇ ಪರಿಗಣಿಸಲ್ಪಡುತ್ತವೆ. ಅಗ್ನಿ 1 700 ಕಿಲೋಮೀಟರ್ ವ್ಯಾಪ್ತಿಯ ಕ್ಷಿಪಣಿಯಾಗಿದ್ದು, ಇದನ್ನು 1989ರಲ್ಲಿ ಒಡಿಶಾದ ಚಾಂದಿಪುರದಲ್ಲಿ ಮೊದಲ ಬಾರಿಗೆ ಪರೀಕ್ಷಿಸಲಾಗಿತ್ತು. ಇದು ಒಂದು ಟನ್ ತೂಕದ ಸಾಂಪ್ರದಾಯಿಕ ಸಿಡಿತಲೆಯನ್ನು (Conventional Warhead) ಹೊತ್ತೊಯ್ಯುತ್ತಿತ್ತು. ಹಾಗೆಯೇ 1999ರಲ್ಲಿ ಎರಡು ಹಂತದ ಘನ ಇಂಧನ ಎಂಜಿನ್ ಹೊಂದಿದ್ದ ಅಗ್ನಿ 2 ಕ್ಷಿಪಣಿ ಪರೀಕ್ಷೆಗೊಂಡಿತು. ಅದು 2,000 ಕಿಲೋಮೀಟರ್ ವ್ಯಾಪ್ತಿ ಹೊಂದಿತ್ತು. ಈ ಕ್ಷಿಪಣಿ 2011ರ ಹೊತ್ತಿಗಾಗಲೇ ಭಾರತದ ಬತ್ತಳಿಕೆ ಸೇರಿತ್ತಾದರೂ, ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್ (Strategic Forces Command)ನಲ್ಲಿ ಅಗ್ನಿ 2 ಅನ್ನು ಮತ್ತೊಮ್ಮೆ 2012ರಲ್ಲಿ ಪರೀಕ್ಷಿಸಿ, ನಂತರ ಅದನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಯಿತು. ಇನ್ನು 2013ರಲ್ಲಿ ಅಗ್ನಿ 2 ಬ್ಯಾಲಿಸ್ಟಿಕ್ ಕ್ಷಿಪಣಿಯ ನ್ಯೂಕ್ಲಿಯರ್ ಸಾಮರ್ಥ್ಯವನ್ನು ಪರೀಕ್ಷಿಸಲಾಗಿತ್ತು. ಹಾಗೆಯೇ ಅಗ್ನಿ 3 ಕ್ಷಿಪಣಿಯನ್ನು 2006ರಲ್ಲೇ ಪರೀಕ್ಷಿಸಲಾಗಿತ್ತು. ಈ ಕ್ಷಿಪಣಿ 3,500 ಕಿಲೋಮೀಟರ್ ವ್ಯಾಪ್ತಿ ಹಾಗೂ 1.5 ಟನ್‌ನಷ್ಟು ನ್ಯೂಕ್ಲಿಯರ್ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇನ್ನು ಅಗ್ನಿ 4 ಕ್ಷಿಪಣಿಯನ್ನು 2012ರಲ್ಲಿ ಅಂತಿಮವಾಗಿ ಪರೀಕ್ಷಿಸಲಾಯಿತು. ಇದನ್ನು ಮೊದಲು "ಅಗ್ನಿ 2 ಪ್ರೈಮ್" ಎಂದು ಕರೆಯಲಾಗುತ್ತಿತ್ತು.ಇನ್ನು ಅಗ್ನಿ 5 ಕ್ಷಿಪಣಿಯನ್ನು ಭಾರತ 2013ರ ಸೆಪ್ಟೆಂಬರ್ 15ರಂದು ಪರೀಕ್ಷಿಸಿತ್ತು. ಆ ಪರೀಕ್ಷೆಯಲ್ಲಿ ಅಗ್ನಿ-5 ಯಶಸ್ವಿಯಾಗಿ ಕಾರ್ಯನಿರ್ವಹಿಸಿತ್ತು. ಇದು 5,000 ಕಿಲೋಮೀಟರ್ ದೂರದ ಗುರಿಯನ್ನೂ ಮುಟ್ಟುತ್ತದೆ. ಆದರೆ ಈ ಅಗ್ನಿಯ ನಿಜ ಸಾಮರ್ಥ್ಯವನ್ನು ಭಾರತ ಬಹಿರಂಗಪಡಿಸುತ್ತಿಲ್ಲ ಎಂಬುದು ಚೀನಾದ ಆರೋಪ. ಏಕೆಂದರೆ ಅವರು ಈ ಅಗ್ನಿ 5 ಕ್ಷಿಪಣಿ 12,000ದಿಂದ 15,000 ಕಿಲೋಮೀಟರ್‌ವರೆಗೂ ತಲುಪುತ್ತದೆ ಎಂಬ ಲೆಕ್ಕಾಚಾರಗಳನ್ನು ನೀಡುತ್ತಿದ್ದಾರೆ. ಈ ಅಗ್ನಿ 5 ಒಂದು ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM) ಆಗಿದ್ದು, 5,000ದಿಂದ 8,000 ಕಿಲೋಮೀಟರ್ ಕಾರ್ಯಾಚರಣಾ ವ್ಯಾಪ್ತಿ ಹೊಂದಿರುವುದರಿಂದ ಇಡೀ ಏಷ್ಯಾ ಹಾಗೂ ಒಂದಷ್ಟು ಯುರೋಪ್ ಕೂಡ ಇದರ ವ್ಯಾಪ್ತಿಗೆ ಸಿಗುತ್ತದೆ. ಇನ್ನು ಈ ಅಗ್ನಿ ಕ್ಷಿಪಣಿ ಮೂರು ಹಂತಗಳಲ್ಲಿ ನಿರ್ಮಾಣಗೊಂಡಿದೆ. ಮೊದಲ ಹಂತದಲ್ಲಿ ಘನ ಇಂಧನ ಎಂಜಿನ್ ಇದ್ದು, ಅದು 50 ಟನ್ ತೂಗುವ ಅಗ್ನಿ 5 ಕ್ಷಿಪಣಿಯನ್ನು ಆಗಸಕ್ಕೆ ಹಾರಿಸುತ್ತದೆ. ಆ ಬಳಿಕ ಆ ಕ್ಷಿಪಣಿ ಮೇಲ್ಭಾಗ ತಲುಪಿದ ನಂತರ ಮೊದಲ ಹಂತ ಕಳಚಿಕೊಂಡು ಕೆಳಗೆ ಬೀಳುತ್ತದೆ. ಈ ಪ್ರಕ್ರಿಯೆ 100 ಸೆಕೆಂಡುಗಳ ಕಾಲ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಅಗ್ನಿ 6 ಎಂಬುದು ಅಗ್ನಿ 5ಕ್ಕಿಂತಲೂ ಹೆಚ್ಚು ದೂರವನ್ನು ಕ್ರಮಿಸುತ್ತದೆ ಎಂದು ಹೇಳಲಾಗುತ್ತಿದೆ. ಇದರ ವ್ಯಾಪ್ತಿ 10,000ದಿಂದ 12,000 ಕಿಲೋಮೀಟರ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಚೀನಾ, ಭಾರತದ ಕ್ಷಿಪಣಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತಿದೆ ಎಂಬ ಬಗ್ಗೆ ಅನುಮಾನ ಪಡುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಅಗ್ನಿ 6, ಜಗತ್ತಿನ ಬಹುತೇಕ ದೇಶಗಳನ್ನು ಭಾರತದ ಗುರಿ ವ್ಯಾಪ್ತಿಗೆ ತರುತ್ತದೆ. ಯುರೋಪ್ ಸಂಪೂರ್ಣವಾಗಿ ಅಗ್ನಿಯ ವ್ಯಾಪ್ತಿಗೆ ಸಿಗುತ್ತದೆ. ಇನ್ನು ಈ ಅಗ್ನಿ 6, ನಾಲ್ಕು ಹಂತಗಳ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ ಆಗಿದೆ. ಹೀಗೆ ಅತ್ಯಂತ ಬಲಿಷ್ಠವಾಗಿರುವ ಈ ಅಗ್ನಿ ಸರಣಿಯ ಕ್ಷಿಪಣಿಗಳ ಪೈಕಿ, ಈಗ ಪ್ರಬಲ ಕ್ಷಿಪಣಿಗೆ ಎಂಐಆರ್‌ವಿ (MIRV) ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಎಂಐಆರ್‌ವಿ ಎಂದರೆ Multiple Independently Targetable Reentry Vehicle. ಇದು ಒಂದೇ ಕ್ಷಿಪಣಿ ಹಲವಾರು ಸಿಡಿತಲೆಗಳನ್ನು ಒಯ್ಯುವುದಕ್ಕೆ ಸಾಧ್ಯವಾಗಿಸುವ ತಂತ್ರಜ್ಞಾನ. ಇಲ್ಲಿ ಒಂದು ಕ್ಷಿಪಣಿ ಉಡಾಯಿಸಿದರೆ, ಶತ್ರುಗಳ ಬೇರೆ ಬೇರೆ ಗುರಿಗಳ ಮೇಲೆ ಬೇರೆ ಬೇರೆ ಸಿಡಿತಲೆಗಳು ಏಕಕಾಲಕ್ಕೆ ದಾಳಿ ನಡೆಸುತ್ತವೆ. ಈ ರೀಎಂಟ್ರಿ ವೆಹಿಕಲ್‌ಗಳು ತಾವೇ ತಮ್ಮ ಗುರಿಯನ್ನು ಹುಡುಕಿಕೊಂಡು ನಿಖರವಾಗಿ ದಾಳಿ ನಡೆಸುತ್ತವೆ. ಹೀಗಾಗಿ ಇದು ಸಾಂಪ್ರದಾಯಿಕ ಕ್ಷಿಪಣಿಗಿಂತಲೂ ಹೆಚ್ಚು ಪ್ರಬಲ ಹಾಗೂ ಹೆಚ್ಚು ಉಪಯುಕ್ತ ಎನಿಸಿಕೊಳ್ಳುತ್ತದೆ. ಅಂತಹ ತಂತ್ರಜ್ಞಾನವನ್ನು ಕ್ಷಿಪಣಿಗೆ ಅಳವಡಿಸಿ ಈಗ ಅದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಎಂಐಆರ್‌ವಿ ತಂತ್ರಜ್ಞಾನವನ್ನು ಒಳಗೊಂಡಿರುವ ಅಗ್ನಿ 5 ಕ್ಷಿಪಣಿಯಲ್ಲಿ ಈಗ ಬಹು ನ್ಯೂಕ್ಲಿಯರ್ ಸಿಡಿತಲೆಗಳನ್ನು ಅಳವಡಿಸಿ ಶತ್ರುಗಳ ಬೇರೆ ಬೇರೆ ಗುರಿಗಳನ್ನು ಹೊಡೆದುರುಳಿಸಬಹುದಾಗಿದೆ. ಇಲ್ಲಿ ಒಂದೇ ಕ್ಷಿಪಣಿ ಬೇರೆ ಬೇರೆ ಗುರಿಗಳನ್ನು ಹೊಡೆಯುವುದರ ಜೊತೆಗೆ ಅವು ಗೈಡೆಡ್ ಆಗಿರುತ್ತವೆ. ಹಾಗೂ ದೂರದೂರದಲ್ಲಿನ ನಾಲ್ಕರಿಂದ ಐದು ಗುರಿಗಳನ್ನು ಹೊಡೆಯುತ್ತದೆ ಎಂದು ಹೇಳಲಾಗುತ್ತಿದ್ದರೂ, ಈ ಬಗ್ಗೆ ಖಚಿತ ದೃಢೀಕರಣ ಸಿಕ್ಕಿಲ್ಲ. ಇನ್ನು ಈಗ ಪರೀಕ್ಷಿಸಲಾಗಿರುವ ಕ್ಷಿಪಣಿಯಲ್ಲಿ ಇಂಡಿಜಿನಿಯಸ್ ಏವಿಯಾನಿಕ್ಸ್ (Indigenous Avionics) ಅನ್ನು ಬಳಸಲಾಗಿದ್ದು, ಹೈ-ಆಕ್ಯುರಸಿ ಸೆನ್ಸರ್‌ಗಳನ್ನೂ ಬಳಸಲಾಗುತ್ತಿದೆ. ಈ ಕ್ಷಿಪಣಿಯಲ್ಲಿನ ಸಾಕಷ್ಟು ಸೆನ್ಸರ್ ಮತ್ತು ಏವಿಯಾನಿಕ್ಸ್‌ಗಳ ನಿರ್ಮಾಣದಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ದೊಡ್ಡದು ಎಂಬ ಮಾಹಿತಿಯನ್ನು ಡಿಆರ್‌ಡಿಒ (DRDO) ನೀಡಿದೆ. ಇನ್ನು ಈ ಕ್ಷಿಪಣಿ ಪರೀಕ್ಷೆಗಾಗಿ ಭಾರತ ನೋಟಿಸ್ (NOTAM) ಜಾರಿ ಮಾಡಿದ ಸಂದರ್ಭದಲ್ಲಿ, ಚೀನಾ ಸೇರಿದಂತೆ ಇನ್ನೂ ಹಲವು ದೇಶಗಳು ಭಾರತ ಅಗ್ನಿ 6 ಎಂಬ ಇನ್ನಷ್ಟು ಭಯಾನಕ ಕ್ಷಿಪಣಿಯನ್ನು ಪರೀಕ್ಷಿಸುತ್ತಿರಬಹುದು ಎಂದು ಭಾವಿಸಿದ್ದವು. ಈ ಅಗ್ನಿ 6, 12,000 ಕಿಲೋಮೀಟರ್‌ಗಳಷ್ಟು ದೂರದ ಗುರಿಯನ್ನೂ ಮುಟ್ಟುತ್ತದೆ ಎನ್ನಲಾಗಿದೆ. ಹೀಗಾಗಿ ಚೀನಾಗೆ ಭಾರತದ ವಿರುದ್ಧ ಹೆಚ್ಚು ಆತಂಕವಿದೆ. ಒಂದು ವೇಳೆ ಅಗ್ನಿ 6 ಯಶಸ್ವಿಯಾದರೆ, ಚೀನಾದ ಯಾವುದೇ ಪ್ರದೇಶವನ್ನು ಭಾರತದ ಯಾವುದೇ ಜಾಗದಿಂದ ಬೇಕಿದ್ದರೂ ಗುರಿಯಾಗಿಸಿಕೊಳ್ಳಬಹುದು. ಒಟ್ಟಿನಲ್ಲಿ ಭಾರತ ಮಿಸೈಲ್ ಶಕ್ತಿಯಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದೆ. ನಮಗೆ ಯುದ್ಧ ವಿಮಾನಗಳನ್ನು ಹಾಗೂ ಡ್ರೋನ್‌ಗಳನ್ನು ಅತ್ಯದ್ಭುತವಾಗಿ ನಿರ್ಮಿಸುವುದು ಸಾಧ್ಯವಾಗದಿದ್ದರೂ, ಕ್ಷಿಪಣಿ ಶಕ್ತಿಯಲ್ಲಿ ಮಾತ್ರ ಭಾರತ ಜಗತ್ತನ್ನೇ ದಂಗುಬಡಿಸುತ್ತಿದೆ. ಈಗಾಗಲೇ ಸೂಪರ್‌ಸಾನಿಕ್ ಬ್ರಹ್ಮೋಸ್ (BrahMos) ಕ್ಷಿಪಣಿಯನ್ನು ಸಿದ್ಧಪಡಿಸಿರುವ ಭಾರತ, ಹೈಪರ್‌ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನೂ ಇತ್ತೀಚೆಗೆ ನಡೆಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯುದ್ಧ ವಿಮಾನ ಹಾಗೂ ಡ್ರೋನ್‌ಗಳ ನಿರ್ಮಾಣದಲ್ಲೂ ಇಂಥದ್ದೇ ಯಶಸ್ಸು ಗಳಿಸಿದಲ್ಲಿ, ಭಾರತದ ರಕ್ಷಣಾ ವಲಯಕ್ಕೆ ಇನ್ನಷ್ಟು ಬಲ ಸಿಗಲಿದೆ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.