ಇದೊಂದು ವಿಶೇಷ ಲೋಕ, ಅಲ್ಲಿ ಮನುಷ್ಯನ ಸದ್ದು ಕೇಳಿಬರುವುದು ಅಪರೂಪ. ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಈ ಕಾಡಿನ ಹೆಸರು ಕೇಳಿದರೆ ಯಾರಿಗಾದರೂ ರೋಮಾಂಚನವಾಗದೆ ಇರದು. ಹೆಸರಿನಷ್ಟೇ ಸುಂದರವಾಗಿರುವ,ಹುಲಿಗಳ ಆವಾಸಸ್ಥಾನವಾಗಿರುವ ಹಾಗೂ ಕರ್ನಾಟಕದ ಅತಿದೊಡ್ಡ ಕಾಡುಗಳಲ್ಲಿ ಒಂದಾಗಿರುವ ನಾಗರಹೊಳೆಯ ವೈಶಿಷ್ಟ್ಯಗಳು ಒಂದೆರಡಲ್ಲ. ಈ ಕಾಡಿನಲ್ಲಿ ವಿಹರಿಸುವುದೇ ಒಂದು ರೋಚಕ ಪಯಣ.
ನಾಗರಹೊಳೆ ಎಂಬುದು ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಅರಣ್ಯ ಪ್ರದೇಶ. ಕಬಿನಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಹರಿಯುವ ಈ ಕಾಡಿನಲ್ಲಿ ಬಳ್ಳೆ ಹಳ್ಳ,ಸಾರಥಿ ಹೊಳೆ ಹಾಗೂ ನಾಗರ್ಹೊಳೆಯಂತಹ ನೀರಿನ ಮೂಲಗಳೂ ಇವೆ. ಒಂದು ಕಡೆ ಬಂಡೀಪುರ,ಮತ್ತೊಂದು ಕಡೆ ಮುದುಮಲೈ ಹಾಗೂ ಇನ್ನೊಂದು ಕಡೆ ವೈನಾಡು ಅರಣ್ಯಗಳನ್ನು ಹೊಂದಿರುವ ಈ ನಾಗರಹೊಳೆ, ಬ್ರಹ್ಮಗಿರಿ ತಪ್ಪಲಿನವರೆಗೂ ಹಬ್ಬಿದೆ. 1999ರಲ್ಲಿ ದೇಶದ ಏಳನೇ ಹುಲಿ ಸಂರಕ್ಷಿತ ಅಭಯಾರಣ್ಯವಾಗಿ ಗುರುತಿಸಿಕೊಂಡ ಇದು, ನೀಲಗಿರಿ ಬಯೋಸ್ಪಿಯರ್ ರಿಸರ್ವ್ ವ್ಯಾಪ್ತಿಯಲ್ಲಿ ಬರುತ್ತದೆ.ಈ ನೀಲಗಿರಿ ವಲಯವು ಅಂತರರಾಷ್ಟ್ರೀಯ ಬಯೋಸ್ಪಿಯರ್ ರಿಸರ್ವ್ ಆಗಿದ್ದು, ಪಶ್ಚಿಮ ಘಟ್ಟದಲ್ಲಿನ ಅತಿದೊಡ್ಡ ಬಯೋಸ್ಪಿಯರ್ ಎಂದು ಗುರುತಿಸಿಕೊಂಡಿದೆ. ಇದು ಕರ್ನಾಟಕ, ತಮಿಳುನಾಡು ಹಾಗೂ ಕೇರಳಗಳಲ್ಲಿನ ರಾಷ್ಟ್ರೀಯ ಉದ್ಯಾನಗಳು ಮತ್ತು ಕಾಡುಗಳನ್ನು ಒಳಗೊಂಡಿದೆ. ಈ ವ್ಯಾಪ್ತಿಯಲ್ಲಿ ಬಂಡೀಪುರ, ಮುದುಮಲೈ, ಮುಕುರ್ತಿ, ಆರಾಲಂ, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನಗಳು ಹಾಗೂ ವೈನಾಡು, ಸತ್ಯಮಂಗಲ, ಕರಿಂಪುಳ ವನ್ಯಜೀವಿ ಧಾಮಗಳು ಬರುತ್ತವೆ. ಈ ಅರಣ್ಯಗಳಲ್ಲಿ ನಾಗರಹೊಳೆಯೂ ಒಂದು.
ಈ ನಾಗರಹೊಳೆ ಒಟ್ಟು 643.39 ಚದರ ಕಿಲೋಮೀಟರ್‌ನಷ್ಟು ವಿಸ್ತಾರವಾಗಿದೆ. 1988ರವರೆಗೂ ಇದೊಂದು ವನ್ಯಜೀವಿ ಧಾಮವಾಗಿತ್ತು. ಆ ನಂತರ ಇದನ್ನು ರಾಷ್ಟ್ರೀಯ ಉದ್ಯಾನವನವಾಗಿ ಗುರುತಿಸಲಾಯಿತು. 1999ರ ವೇಳೆಗೆ ಇದು ಹುಲಿ ಸಂರಕ್ಷಿತಾರಣ್ಯವಾಗಿ ಗುರುತಿಸಿಕೊಂಡಿತು. ಈ ಟೈಗರ್ ರಿಸರ್ವ್ ಅನ್ನು ಹುಣಸೂರು,ನಾಗರಹೊಳೆ ಹಾಗೂ ಮೇಟಿಕುಪ್ಪೆ ಎಂಬ ಮೂರು ಉಪ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇಲ್ಲಿ ಆನೇಚೌಕೂರು, ಅಂತರಸಂತೆ, ಡಿ.ಬಿ. ಕುಪ್ಪೆ, ಕಲ್ಲಹಳ್ಳ, ಮೇಟಿಕುಪ್ಪೆ, ನಾಗರಹೊಳೆ, ಹುಣಸೂರು ಹಾಗೂ ವೀರನಹೊಸಳ್ಳಿ ಸೇರಿದಂತೆ ಒಟ್ಟು ಎಂಟು ರೇಂಜ್‌ಗಳಿವೆ.
ಹೀಗೆ ವಿಸ್ತಾರವಾಗಿ ಹರಡಿರುವ ಈ ಕಾಡಿನಲ್ಲಿ ಹುಲಿಯ ಗರ್ಜನೆ ಹೆಚ್ಚಾಗಿ ಕೇಳಿಬರುತ್ತದೆ. ಅದರ ಜೊತೆಗೆ ಆನೆ, ಚಿರತೆ, ಕಾಡುಕೋಣ, ವೈಲ್ಡ್ ಡಾಗ್ಸ್, ಜಿಂಕೆ, ಸಾಂಬಾರ್ ಸೇರಿದಂತೆ ಸಾಕಷ್ಟು ಬಗೆಯ ವನ್ಯಪ್ರಾಣಿಗಳಿಗೆ ಈ ಕಾಡು ಆಶ್ರಯ ನೀಡಿದೆ. ಈ ಪ್ರಾಣಿಗಳ ಜೊತೆಗೆ 270ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಚಿಲಿಪಿಲಿಯೂ ಇಲ್ಲಿ ಕೇಳಿಬರುತ್ತದೆ. ಹಾಗೆಯೇ ಅತ್ಯುತ್ತಮವಾದ ಶ್ರೀಗಂಧ, ತೇಗ, ಹೊನ್ನೆ ಮರಗಳು ಕಾಡಿನ ಹಸಿರನ್ನು ಇಮ್ಮಡಿಗೊಳಿಸಿವೆ.
ಈ ನಾಗರಹೊಳೆ ಮೈಸೂರು ಅರಸರ ಕಾಲದಲ್ಲಿ ರಾಜಮನೆತನದವರು ಬೇಟೆಯಾಡಲು ಬಳಸುತ್ತಿದ್ದ ಕಾಡಾಗಿತ್ತು. ಶತಮಾನಗಳಿಂದಲೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಪ್ರಾಣಿಗಳು ಇದ್ದಿದ್ದರಿಂದ ಅರಸರ ಬೇಟೆಯ ಮೋಜಿಗೆ ಇದು ಬಳಕೆಯಾಗುತ್ತಿತ್ತು. ಹಾಗೆಯೇ ಇಲ್ಲಿ ಬೆಳೆಯುತ್ತಿದ್ದ ಶ್ರೀಗಂಧದ ಮರಗಳು ಮೈಸೂರು ಸಂಸ್ಥಾನಕ್ಕೆ ಆದಾಯವನ್ನೂ ತಂದುಕೊಡುತ್ತಿದ್ದವು. ಹೀಗಾಗಿ ನಾಗರಹೊಳೆ ವನ್ಯಜೀವಿ ಧಾಮದ ಜೊತೆಗೆ ಆರ್ಥಿಕ ಮೂಲವಾಗಿಯೂ ಬಳಕೆಯಾಗುತ್ತಿತ್ತು. ಈ ನಾಗರಹೊಳೆಯಲ್ಲಿ ಸಾಕಷ್ಟು ಜನವಸತಿಯೂ ಇದೆ. ಅದರಲ್ಲೂ ಜೇನುಕುರುಬರು ಹಾಗೂ ಕೊರಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇದು ನಾಗರಹೊಳೆಯ ಕಥೆಯಾದರೆ, ಈ ಕಾಡಿನ ಸೊಬಗನ್ನು ಸವಿಯುತ್ತಲೇ ಕರ್ನಾಟಕ ಅರಣ್ಯ ಇಲಾಖೆಯ ಇತಿಹಾಸವನ್ನೂ ಒಮ್ಮೆ ನೋಡೋಣ. ನಾಗರಹೊಳೆ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಅರಣ್ಯಗಳಿಗೂ ಕನ್ಸರ್ವೇಟರ್‌ಗಳನ್ನು ನೇಮಿಸಿದ್ದು ಸುಮಾರು ಒಂದೂವರೆ ಶತಮಾನದ ಹಿಂದೆ. 1864ರಲ್ಲಿ ಅಂದಿನ ಮೈಸೂರು ಸಂಸ್ಥಾನದಲ್ಲಿದ್ದ ಕಾಡುಗಳ ರಕ್ಷಣೆಗಾಗಿ ಒಂದು ತಂಡವನ್ನು ರಚಿಸಲಾಗಿತ್ತು. ಜನವರಿ 11, 1864ರಂದು ಮೈಸೂರು ಫಾರೆಸ್ಟ್ ಡಿಪಾರ್ಟ್‌ಮೆಂಟ್ ಅನ್ನು ಸ್ಥಾಪಿಸಿ, ಸೇನಾಧಿಕಾರಿಯಾಗಿದ್ದ ಮೇಜರ್ ಹಂಟರ್ ಅವರನ್ನು ಮೊದಲ ಕನ್ಸರ್ವೇಟರ್ ಆಫ್ ಫಾರೆಸ್ಟ್ ಆಗಿ ನೇಮಿಸಲಾಗಿತ್ತು. ಅವರ ಜೊತೆಗೆ ಇನ್ನೂ ನಾಲ್ವರು ಸಬ್ ಅಸಿಸ್ಟೆಂಟ್ ಕನ್ಸರ್ವೇಟರ್‌ಗಳನ್ನೂ ಕಾಡಿನ ರಕ್ಷಣೆಗೆ ನಿಯೋಜಿಸಲಾಗಿತ್ತು. ಈ ಕನ್ಸರ್ವೇಟರ್ ಹುದ್ದೆ 1879ರವರೆಗೂ ಇತ್ತು. ಆ ನಂತರ ಡಿಸಿಗಳನ್ನೇ ಫಾರೆಸ್ಟ್ ಇನ್‌ಚಾರ್ಜ್‌ಗಳನ್ನಾಗಿ ನೇಮಿಸಲಾಯಿತು. 1886ರಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ಎಂಬ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಆದರೂ ಡಿಸಿಗಳಿಗಿದ್ದ ಅಧಿಕಾರವನ್ನು ಮುಂದುವರೆಸುವುದಕ್ಕೆ ಸಂಸ್ಥಾನ ನಿರ್ಧರಿಸಿತ್ತು. ಹೀಗೆ ಡಿಸಿಗಳ ಅಡಿಯಲ್ಲಿ ರೇಂಜರ್‌ಗಳು ಹಾಗೂ ಫಾರೆಸ್ಟ್ ಗಾರ್ಡ್‌ಗಳು ಸಹ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ ಕೊಡಲಾಗಿತ್ತು. ಅವತ್ತಿನಿಂದಲೂ ಕಾಡುಗಳನ್ನು ರಕ್ಷಿಸುವುದಕ್ಕೆ ಅಧಿಕಾರಿಗಳನ್ನು ನೇಮಿಸುವುದು ನಡೆದುಕೊಂಡು ಬಂದಿದೆ.
ಹಾಗೆ ನೋಡಿದರೆ, ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಿಗೆ ಕನ್ಸರ್ವೇಟರ್ ಅನ್ನು ನೇಮಿಸಿದ್ದು ಮದ್ರಾಸ್ ಪ್ರಾಂತ್ಯದಲ್ಲಿ. ಅಂದಿನ ಮದ್ರಾಸ್ ಪ್ರಾಂತ್ಯ ಎಂದರೆ, ಇಂದಿನ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡಗಳನ್ನು ಒಳಗೊಂಡು, ಕೇರಳದ ಮಲಬಾರ್ ಹಾಗೂ ತಮಿಳುನಾಡನ್ನು ಸಂಪೂರ್ಣವಾಗಿ ಆವರಿಸಿದ್ದ ಮತ್ತು ಪೂರ್ವದಲ್ಲಿ ಇಂದಿನ ರಾಯಲಸೀಮಾ ಪ್ರದೇಶ ಹಾಗೂ ಬಳ್ಳಾರಿಯನ್ನೂ ಒಳಗೊಂಡಿದ್ದ ಬಹುದೊಡ್ಡ ಪ್ರದೇಶವಾಗಿತ್ತು. ಇದನ್ನು ಬ್ರಿಟಿಷರು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು ಮತ್ತು ಈ ಪ್ರದೇಶದ ಆಡಳಿತ ಮದ್ರಾಸ್‌ನಿಂದಲೇ ನಡೆಯುತ್ತಿತ್ತು. ಹಾಗಾಗಿ 1847ರಲ್ಲೇ ಅಲ್ಲಿ ಕನ್ಸರ್ವೇಟರ್ ಅನ್ನು ನೇಮಿಸಲಾಗಿತ್ತು. ಆ ನಂತರ ಮೈಸೂರಿನಲ್ಲಿ ಅರಣ್ಯ ರಕ್ಷಣೆಗೆ ಅಧಿಕಾರಿಯನ್ನು ನೇಮಿಸಲಾಯಿತು. ಕೊಡಗಿನಲ್ಲಿ 1865ರಲ್ಲಿ ಹಾಗೂ ಹೈದರಾಬಾದ್ ನಿಜಾಮನ ರಾಜ್ಯದಲ್ಲಿ 1867ರಲ್ಲಿ ಕನ್ಸರ್ವೇಟರ್‌ಗಳನ್ನು ನೇಮಿಸಲಾಗಿತ್ತು. ಆದರೆ ಕೊಡಗಿನ ಕಾಡಿನ ಉಸ್ತುವಾರಿ ಮೈಸೂರು ಕನ್ಸರ್ವೇಟರ್ ಅಡಿಗೆ ಬರುವಂತೆ ಬ್ರಿಟಿಷರು ನೋಡಿಕೊಂಡರು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಮೈಸೂರು ಫಾರೆಸ್ಟ್ ಡಿಪಾರ್ಟ್‌ಮೆಂಟ್ ಅಡಿಯಲ್ಲಿ ಇದ್ದದ್ದು ಕೇವಲ ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿದ್ದ ಕಾಡುಗಳಷ್ಟೇ. ಇದರಲ್ಲಿ ಬಂಡೀಪುರ, ನಾಗರಹೊಳೆ ಹಾಗೂ ಕಾವೇರಿ ವನ್ಯಜೀವಿ ಧಾಮಗಳು ಪ್ರಮುಖವಾಗಿದ್ದವು. ಆ ನಂತರ ರಾಜ್ಯಗಳ ಪುನರ್ ವಿಂಗಡಣೆಯಾದ ಬಳಿಕ, ಇಂದಿನ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ ಹಾಗೂ ಕೊಳ್ಳೇಗಾಲದಲ್ಲಿರುವ ಕಾಡುಗಳು ಮೈಸೂರಿನ ಹಿಡಿತಕ್ಕೆ ಬಂದವು.
ರಾಜ್ಯದಲ್ಲಿ ಹಾಗೂ ದೇಶದಲ್ಲಿರುವ ಅರಣ್ಯ ಸಂಪತ್ತನ್ನು ಕಾಪಾಡಿಕೊಳ್ಳುವುದಕ್ಕೆ ಅಂದಿನಿಂದಲೂ ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ, ಇಂದಿಗೂ ಅದು ಮುಂದುವರೆಯುತ್ತಿದೆ. ಅದರ ಫಲವೇ, ಇಡೀ ದೇಶದಲ್ಲಿ ಹುಲಿಗಳನ್ನು ಹೆಚ್ಚಾಗಿ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಮ್ಮ ಮತ್ತು ಮಧ್ಯಪ್ರದೇಶದ ನಡುವೆ ಆಗಾಗ ಕೇವಲ ಒಂದೆರಡು ಹುಲಿಗಳ ಲೆಕ್ಕದಲ್ಲಿ ಮೊದಲ ಸ್ಥಾನದ ಪೈಪೋಟಿ ನಡೆಯುತ್ತಿರುತ್ತದೆ. ಎಲ್ಲಿ ಹುಲಿಗಳು ಹೆಚ್ಚಾಗಿರುತ್ತವೋ ಅಲ್ಲಿ ಕಾಡಿನ ಸಂಪತ್ತು ಕೂಡ ಚೆನ್ನಾಗಿರುತ್ತದೆ. ಹಾಗಾಗಿ ಇದನ್ನು ಅರಣ್ಯ ಇಲಾಖೆ ಹೀಗೆಯೇ ಕಾಪಾಡಿಕೊಳ್ಳಲಿ, ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಹಾಗೂ ನಮ್ಮ ಮುಂದಿನ ಪೀಳಿಗೆಗೂ ಕಾಡು ಮತ್ತು ಕಾಡುಪ್ರಾಣಿಗಳನ್ನು ಜೀವಂತವಾಗಿ ನೋಡುವಂತಾಗಲಿ ಎಂಬುದು ನಮ್ಮ ಆಶಯ.
ಇದಕ್ಕಾಗಿ ನಾವೇನೂ ಹೆಚ್ಚಿಗೆ ಶ್ರಮಿಸಬೇಕಿಲ್ಲ. ಇಲ್ಲಿ ನಾವು ಮಾಡಬೇಕಿರುವುದು ಇಷ್ಟೇ: ಕಾಡುಗಳನ್ನು ನೋಡಲು ಹೋದಾಗ ಕುಚೇಷ್ಟೆಗಳನ್ನು ಮಾಡಬಾರದು; ಮುಖ್ಯವಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಎಣ್ಣೆ ಬಾಟಲಿಗಳನ್ನು ಕಾಡಿನಲ್ಲಿ ಎಸೆಯಬಾರದು; ಕುರುಕಲು ತಿಂಡಿಗಳನ್ನು ಕಾಡುಪ್ರಾಣಿಗಳಿಗೆ ನೀಡಬಾರದು. ಸಾಮಾನ್ಯವಾಗಿ ಕಾಡಿನ ಮಧ್ಯೆ ರಸ್ತೆಯಲ್ಲಿ ಹೋಗುವಾಗ ಹಲವಾರು ಮಂದಿ ಇದನ್ನೇ ಮಾಡುತ್ತಾರೆ, ದಯವಿಟ್ಟು ಹೀಗೆ ಮಾಡಬೇಡಿ. ಅಪ್ಪಿತಪ್ಪಿ ನೀವು ಹೋಗುವ ಹಾದಿಯಲ್ಲಿ ಬೆಂಕಿ ಕಾಣಿಸಿಕೊಂಡರೆ ಅದನ್ನು ಆರಿಸಲು ಪ್ರಯತ್ನಿಸಿ. ಒಂದು ವೇಳೆ ಬೆಂಕಿ ಹೆಚ್ಚಾಗಿದ್ದರೆ ಅದನ್ನು ಅರಣ್ಯ ಇಲಾಖೆಗೆ ತಿಳಿಸಿ. ಈ ಬೆಂಕಿ ಕಾಡಿಗೆ ಬಹುದೊಡ್ಡ ಶತ್ರು. ಹಾಗಾಗಿ ಬೆಂಕಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರೂ ಕೈಲಾದ ಸಹಾಯ ಮಾಡುವುದು ಉತ್ತಮ. ಹೀಗೆ ಮಾಡುವುದರ ಮೂಲಕ ನಾವು ಈಗಿರುವ ಕಾಡನ್ನು ಕಾಪಾಡಿಕೊಳ್ಳಬೇಕಿದೆ.
Nagarahole Tiger Reserve — ಪಶ್ಚಿಮ ಘಟ್ಟದ ಹೆಮ್ಮೆಯ ಹುಲಿ ಸಂರಕ್ಷಿತ ಅರಣ್ಯದ ಇತಿಹಾಸ.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.