Health

ವಾಕಿಂಗ್ ಬೇಕೇ, ಜಾಗಿಂಗ್ ಬೇಕೇ? ನಿಮಗೆ ಸೂಕ್ತವಾದ ವ್ಯಾಯಾಮ ಯಾವುದು?

ವಾಕಿಂಗ್ ಬೇಕೇ, ಜಾಗಿಂಗ್ ಬೇಕೇ? ನಿಮಗೆ ಸೂಕ್ತವಾದ ವ್ಯಾಯಾಮ ಯಾವುದು?
ದಿನಕ್ಕೆ 45 ನಿಮಿಷ ವಾಕಿಂಗ್ ಮಾಡುವುದು ಎಲ್ಲರಿಗೂ ಕಡ್ಡಾಯವಾಗಬೇಕಾದ ಅಭ್ಯಾಸ. ಇದನ್ನು ಯಾರು ಬೇಕಾದರೂ ಮಾಡಬಹುದು, ಮತ್ತು ಇದು ಪ್ರತಿಯೊಬ್ಬರಿಗೂ ಒಳ್ಳೆಯದು. ಹೃದಯದ ಕಾಯಿಲೆ, ರಕ್ತದೊತ್ತಡ, ಶುಗರ್, ಖಿನ್ನತೆ, ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ವಾಕಿಂಗ್ ಒಂದು ಸರಳ ಮದ್ದು. ಆದರೆ ಸುಮ್ಮನೆ ಮನೆಯೊಳಗೆ ಅಥವಾ ಟ್ರೆಡ್‌ಮಿಲ್‌ನಲ್ಲಿ ವಾಕಿಂಗ್ ಮಾಡಿದರೆ ಅಷ್ಟೇನೂ ಪ್ರಯೋಜನವಾಗುವುದಿಲ್ಲ. ಪಾರ್ಕ್‌ನಲ್ಲಿ ನಡೆಯುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ. ತಾಜಾ ಗಾಳಿ, ಹಕ್ಕಿಗಳ ಚಿಲಿಪಿಲಿ ಮನಸ್ಸಿಗೆ ಮುದ ನೀಡುತ್ತದೆ ಮತ್ತು ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ ಎಂಬ ಮಾತನ್ನು ನೀವು ಕೇಳಿರಬಹುದು, ಅನುಭವಿಸಿಯೂ ಇರಬಹುದು. ಇದು ನಿಜ. ಇಂದು ಪಾರ್ಕ್‌ಗಳು ಜನರಿಂದ ತುಂಬಿ ತುಳುಕುತ್ತಿರುವುದೇ ಇದಕ್ಕೆ ಸಾಕ್ಷಿ; ನಡಿಗೆಯ ಮಹತ್ವ ಈಗ ಎಲ್ಲರಿಗೂ ಅರ್ಥವಾಗಿದೆ. ಪ್ರತಿದಿನದ ವಾಕಿಂಗ್ ನಮ್ಮ ಆರೋಗ್ಯವನ್ನು ಗಣನೀಯವಾಗಿ ಸುಧಾರಿಸುತ್ತದೆ ಮತ್ತು ಆಯಸ್ಸನ್ನು ಹೆಚ್ಚಿಸುತ್ತದೆ ಎಂಬುದನ್ನು ಪ್ರತಿಯೊಬ್ಬ ವೈದ್ಯರೂ ಒಪ್ಪುತ್ತಾರೆ. ಇದು ನಡಿಗೆಯ ಕಥೆಯಾದರೆ, ಜಾಗಿಂಗ್‌ದ್ದು ಇನ್ನೊಂದೇ ಕಥೆ. ಹಾಗಾದರೆ ವಾಕಿಂಗ್ ಉತ್ತಮವೋ ಅಥವಾ ಜಾಗಿಂಗ್ ಉತ್ತಮವೋ? ಈ ಲೇಖನದಲ್ಲಿ ತಿಳಿದುಕೊಳ್ಳೋಣ. ವಾಕಿಂಗ್ ಮತ್ತು ಜಾಗಿಂಗ್ ನಡುವಿನ ವ್ಯತ್ಯಾಸವನ್ನು ನೋಡಿದರೆ, ವಾಕಿಂಗ್ (Walking) ಎಂದರೆ ಒಂದು ಕಾಲು ಯಾವಾಗಲೂ ನೆಲದ ಸಂಪರ್ಕದಲ್ಲಿರುವ ಚಲನೆ. ಇದರಲ್ಲಿ ದೇಹದ ಮೇಲೆ ಬೀಳುವ ಒತ್ತಡ ಕಡಿಮೆ. ಜಾಗಿಂಗ್ (Jogging) ಎಂದರೆ ಓಡುವ ರೀತಿಯ ವ್ಯಾಯಾಮ. ಇದರಲ್ಲಿ ಕೆಲವು ಕ್ಷಣಗಳಲ್ಲಿ ಎರಡೂ ಕಾಲುಗಳು ನೆಲದಿಂದ ಮೇಲಕ್ಕೆ ಏಳುತ್ತವೆ. ನಂತರ ಕಾಲು ನೆಲಕ್ಕೆ ಬಿದ್ದಾಗ, ದೇಹದ ತೂಕದ ಹಲವಾರು ಪಟ್ಟು ಒತ್ತಡ ಮಂಡಿ ಮತ್ತು ಕಾಲಿನ ಜಾಯಿಂಟ್‌ಗಳ ಮೇಲೆ ಬೀಳಬಹುದು. ಹಾಗಾದರೆ ಜಾಗಿಂಗ್ ಮಾಡಲೇಬಾರದೇ? ಖಂಡಿತ ಇಲ್ಲ. ಜಾಗಿಂಗ್ ಕೂಡ ಒಂದು ಉತ್ತಮ ವ್ಯಾಯಾಮ. ನಿಮ್ಮ ದೇಹದ ಸ್ಥಿತಿ ಚೆನ್ನಾಗಿದ್ದರೆ, ಸೂಕ್ತ ತೂಕ ಇದ್ದರೆ, ಸರಿಯಾದ ತಂತ್ರ ಮತ್ತು ಶೂ ಬಳಸಿದರೆ, ಜಾಗಿಂಗ್ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡಬಹುದು. ಆದರೆ "ಎಲ್ಲರೂ ಓಡಲೇಬೇಕು" ಎಂಬ ನಿಯಮವೇನೂ ಇಲ್ಲ. ನಿಮ್ಮ ದೇಹಕ್ಕೆ ಯಾವುದು ಸೂಕ್ತವೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಯಾರಿಗೆ ವಾಕಿಂಗ್ ಸೂಕ್ತ ಮತ್ತು ಯಾರಿಗೆ ಜಾಗಿಂಗ್ ಸೂಕ್ತ ಎಂಬುದನ್ನು ತಿಳಿದುಕೊಳ್ಳುವುದೂ ಮುಖ್ಯ. ಮಂಡಿ ನೋವು ಇರುವವರು, ಹೆಚ್ಚು ತೂಕ ಇರುವವರು, ಹೊಸದಾಗಿ ವ್ಯಾಯಾಮ ಆರಂಭಿಸುವವರು ಹಾಗೂ ವಯಸ್ಸಾದವರಿಗೆ ವಾಕಿಂಗ್ ಉತ್ತಮ ಆಯ್ಕೆಯಾಗಿದೆ. ದೈಹಿಕವಾಗಿ ಫಿಟ್ ಆಗಿರುವವರು, ಯಾವುದೇ ಜಾಯಿಂಟ್ ಸಮಸ್ಯೆ ಇಲ್ಲದವರು ಮತ್ತು ಸರಿಯಾದ ತರಬೇತಿ ಪಡೆದವರು ಜಾಗಿಂಗ್ ಮಾಡಬಹುದು.
ವಾಕಿಂಗ್ ಎಂಬುದು ಸರಳವಾದರೂ ಪರಿಣಾಮಕಾರಿಯಾದ ವ್ಯಾಯಾಮ. ಇದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡಬಹುದು, ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ ಹಾಗೂ ಮಂಡಿಗಳ ಮೇಲೆ ಕಡಿಮೆ ಒತ್ತಡ ಉಂಟುಮಾಡುತ್ತದೆ. ವಿಶೇಷವಾಗಿ 40 ವರ್ಷ ಮೇಲ್ಪಟ್ಟವರು ಅಥವಾ ಈಗಾಗಲೇ ಮಂಡಿ ಸಮಸ್ಯೆ ಇರುವವರು ವೇಗದ ವಾಕಿಂಗ್‌ನಿಂದ ಉತ್ತಮ ಪ್ರಯೋಜನ ಪಡೆಯಬಹುದು. ಜಾಗಿಂಗ್‌ನಿಂದ ಮಂಡಿಗೆ ಸಮಸ್ಯೆ ಬರುವುದೇಕೆ ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ. ನೀವು ಆರೋಗ್ಯಕ್ಕಾಗಿ ಮಾಡುತ್ತಿರುವ ವ್ಯಾಯಾಮವೇ ನಿಮ್ಮ ಮಂಡಿಗಳಿಗೆ ತೊಂದರೆ ಕೊಡುತ್ತಿದೆಯೇ? "ಜಾಗಿಂಗ್ ಮಾಡಿದರೆ ಮಾತ್ರ ಫಿಟ್ ಆಗುತ್ತೇವೆ", "ಹೆಚ್ಚು ಓಡಿದರೆ ಹೆಚ್ಚು ಕ್ಯಾಲರಿ ಬರ್ನ್ ಆಗುತ್ತದೆ" ಎಂದು ಹಲವರು ಭಾವಿಸುತ್ತಾರೆ. ಆದರೆ ತಪ್ಪಾದ ರೀತಿಯಲ್ಲಿ ಜಾಗಿಂಗ್ ಮಾಡಿದರೆ, ಕೆಲವರಿಗೆ ಮಂಡಿ ನೋವು, ಲಿಗಮೆಂಟ್ ಸಮಸ್ಯೆ ಹಾಗೂ ಕಾರ್ಟಿಲೇಜ್ ಮೇಲೆ ಒತ್ತಡ ಬರಬಹುದು. ಜಾಗಿಂಗ್ ಎಲ್ಲರಿಗೂ ಕೆಟ್ಟದ್ದು ಎಂದು ಅರ್ಥವಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ ಎಚ್ಚರಿಕೆ ಅಗತ್ಯ. ದೇಹದ ತೂಕ ಹೆಚ್ಚಿದ್ದರೆ, ಪ್ರತಿ ಹೆಜ್ಜೆಯಲ್ಲೂ ಮಂಡಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅಂತಹವರು ಮೊದಲು ವೇಗದ ವಾಕಿಂಗ್‌ನಿಂದ ಆರಂಭಿಸುವುದು ಉತ್ತಮ. ಸೂಕ್ತ ಕುಶನಿಂಗ್ ಇಲ್ಲದ ಶೂ ಧರಿಸಿ ಓಡಿದರೆ, ಕಾಲಿಗೆ ಆಗುವ ಆಘಾತ ನೇರವಾಗಿ ಮಂಡಿಗೆ ವರ್ಗಾವಣೆಯಾಗಬಹುದು. ದೇಹವನ್ನು ಸಿದ್ಧಪಡಿಸದೆ ವಾರ್ಮ್-ಅಪ್ ಮಾಡದೇ ನೇರವಾಗಿ ಓಡಲು ಆರಂಭಿಸಿದರೆ, ಸ್ನಾಯುಗಳು ಮತ್ತು ಜಾಯಿಂಟ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅದೇ ರೀತಿ ತಪ್ಪಾದ ಭಂಗಿ (posture), ಅತಿ ದೊಡ್ಡ ಹೆಜ್ಜೆಗಳು ಮತ್ತು ಕಾಲನ್ನು ಗಟ್ಟಿಯಾಗಿ ನೆಲಕ್ಕೆ ಬಡಿಯುವುದು ಮಂಡಿ ಸಮಸ್ಯೆಗೆ ಕಾರಣವಾಗಬಹುದು. ಮಂಡಿಯನ್ನು ರಕ್ಷಿಸಿಕೊಳ್ಳಲು ವ್ಯಾಯಾಮಕ್ಕೂ ಮೊದಲು 5–10 ನಿಮಿಷ ವಾರ್ಮ್-ಅಪ್ ಮಾಡಬೇಕು. ನಿಮ್ಮ ಕಾಲಿಗೆ ಸರಿಹೊಂದುವ ಉತ್ತಮ ಗುಣಮಟ್ಟದ ಶೂ ಬಳಸಬೇಕು. ನೋವು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಜಾಗಿಂಗ್‌ನ ದೂರ ಮತ್ತು ವೇಗವನ್ನು ನಿಧಾನವಾಗಿ ಹೆಚ್ಚಿಸಬೇಕು. ಜೊತೆಗೆ ಕಾಲಿನ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನೂ ನಿಯಮಿತವಾಗಿ ಮಾಡುವುದು ಉತ್ತಮ. ವಾಕಿಂಗ್ ಮತ್ತು ಜಾಗಿಂಗ್ ಎರಡೂ ಒಳ್ಳೆಯ ವ್ಯಾಯಾಮಗಳೇ. ಆದರೆ ನಿಮ್ಮ ವಯಸ್ಸು, ತೂಕ, ದೇಹದ ಸಾಮರ್ಥ್ಯ ಮತ್ತು ಮಂಡಿಯ ಆರೋಗ್ಯದ ಆಧಾರದ ಮೇಲೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ಆರೋಗ್ಯಕ್ಕಾಗಿ ಮಾಡುವ ವ್ಯಾಯಾಮವೇ ಆರೋಗ್ಯಕ್ಕೆ ಸಮಸ್ಯೆಯಾಗಬಾರದು. ಆದ್ದರಿಂದ, ನಿಮ್ಮ ದೇಹದ ಮಾತು ಕೇಳಿ ಮತ್ತು ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿ.
Raksha V
Written By

Raksha V

Content Writer

15 years of experience in media and digital media as a Reporter, Sr. Anchor Voice Over artist

Comments

No comments yet.