ಋಷಿಕೇಶ – ಹಿಮಾಲಯದ ಹೆಬ್ಬಾಗಿಲು ಮತ್ತು Yoga Capital of the World
ನೂರಾರು ದೇಗುಲಗಳಿಗೆ, ಐತಿಹಾಸಿಕ ಕೇಂದ್ರಗಳಿಗೆ ಮತ್ತು ಹಿಂದೂ ತೀರ್ಥಕ್ಷೇತ್ರಗಳಿಗೆ (Hindu Pilgrimage Sites) ಹಿಮಾಲಯವೇ ಮಡಿಲು. ಈ ಹಿಮಾಲಯಕ್ಕೆ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಪ್ರದೇಶ, ಸಾಹಸ ಕ್ರೀಡೆಗಳಿಗೂ (Adventure Sports) ಮತ್ತು ವನವಿಹಾರಕ್ಕೂ ಹೆಸರುವಾಸಿ. ಅದು ಪ್ರಪಂಚದ ಯೋಗ ರಾಜಧಾನಿ (Yoga Capital of the World) ಎಂದೂ ಪ್ರಸಿದ್ಧ. ತಪಸ್ಸಿಗೆ, ಧ್ಯಾನಕ್ಕೆ ಮತ್ತು ಆಧ್ಯಾತ್ಮಿಕ ಸಾಧನೆಗೆ (Spiritual Tourism) ಒಂದು ಅತ್ಯುತ್ತಮ ತಾಣವೆನಿಸಿಕೊಂಡಿರುವ ಆ ಪ್ರದೇಶ ಋಷಿಕೇಶ.
ಉತ್ತರಾಖಂಡ (Uttarakhand) – ಕೇದಾರನಾಥ, ಬದರೀನಾಥ, ಗಂಗೋತ್ರಿ, ಯಮುನೋತ್ರಿ, ಹರಿದ್ವಾರ ಮೊದಲಾದ ಭಾರತದ ಪ್ರಮುಖ ತೀರ್ಥಕ್ಷೇತ್ರಗಳನ್ನು ಹೊಂದಿರುವ ರಾಜ್ಯ. ಇಲ್ಲಿನ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮತ್ತೊಂದು ಪ್ರಸಿದ್ಧ ತೀರ್ಥಕ್ಷೇತ್ರವೇ ಋಷಿಕೇಶ (Rishikesh). ಇದು ಸಮುದ್ರ ಮಟ್ಟದಿಂದ ಸುಮಾರು 340 ಮೀಟರ್ ಎತ್ತರದಲ್ಲಿದೆ. ಗಂಗಾ ನದಿಯ ತೀರದಲ್ಲಿರುವ ಋಷಿಕೇಶವನ್ನು ಹಿಮಾಲಯದ ಹೆಬ್ಬಾಗಿಲು (Gateway to the Himalayas) ಎಂದೇ ಕರೆಯಲಾಗುತ್ತದೆ. ಇದು ಪ್ರಪಂಚದ ಯೋಗ ರಾಜಧಾನಿ (World Yoga Capital) ಕೂಡ ಹೌದು. ಪ್ರತಿ ವರ್ಷ ಇಲ್ಲಿ ಅಂತಾರಾಷ್ಟ್ರೀಯ ಯೋಗ ಉತ್ಸವ (International Yoga Festival) ಆಯೋಜನೆಯಾಗುತ್ತದೆ. ಇತರ ಹಲವು ತೀರ್ಥಕ್ಷೇತ್ರಗಳಂತೆಯೇ ಇಲ್ಲಿಯೂ ಮದ್ಯ ಹಾಗೂ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ.
ಋಷಿಕೇಶವನ್ನು ಹಿಂದೆ ಹೃಷಿಕೇಶ ಎಂದು ಕರೆಯಲಾಗುತ್ತಿತ್ತು. ಹೃಷಿಕೇಶ ಎಂಬುದು ವಿಷ್ಣುವಿನ ಒಂದು ಹೆಸರು, ಇದರ ಉಲ್ಲೇಖ ವಿಷ್ಣು ಸಹಸ್ರನಾಮದಲ್ಲಿ ದೊರೆಯುತ್ತದೆ. ಹೃಷಿಕೇಶ ಎಂದರೆ ಇಂದ್ರಿಯಗಳ ದೇವರು ಎಂಬ ಅರ್ಥವಿದೆ. ಇದನ್ನೇ ಇಂದು ಋಷಿಕೇಶ ಎಂದು ಕರೆಯಲಾಗುತ್ತದೆ. ಹಿಂದೆ ರೈಭ್ಯ ಮಹರ್ಷಿ ಇಲ್ಲಿ ವಿಷ್ಣುವಿನ ಕುರಿತು ತಪಸ್ಸು ಮಾಡಿ ಹರಿ ಕೃಪೆಗೆ ಪಾತ್ರನಾಗಿದ್ದ ಎಂದು ಸ್ಥಳ ಪುರಾಣ ಹೇಳುತ್ತದೆ. ರೈಭ್ಯನ ಭಕ್ತಿಗೆ ಮೆಚ್ಚಿದ ಮಹಾವಿಷ್ಣು ಹೃಷಿಕೇಶನಾಗಿ ದರ್ಶನ ನೀಡಿದ್ದ. ಸ್ಕಂದ ಪುರಾಣದಲ್ಲಿ ಹೃಷಿಕೇಶವನ್ನು ಕುಬ್ಜಾಮ್ರಕ ಎಂದೂ ಹೇಳಲಾಗಿದೆ; ರೈಭ್ಯ ಮಹರ್ಷಿಗೆ ಮಹಾವಿಷ್ಣು ಮಾವಿನ ಮರವೊಂದರ ಕೆಳಗೆ ದರ್ಶನ ನೀಡಿದ್ದರಿಂದ ಈ ಹೆಸರು ಬಂತು ಎಂದು ಹೇಳಲಾಗುತ್ತದೆ. ಸ್ಕಂದ ಪುರಾಣದಲ್ಲಿ ಹೃಷಿಕೇಶವನ್ನು ಕೇದಾರಖಂಡದ ಒಂದು ಭಾಗವಾಗಿ ಉಲ್ಲೇಖಿಸಲಾಗಿದೆ. ರಾಮಾಯಣದ ಕೆಲವು ಕಥೆಗಳ ಪ್ರಕಾರ, ಶ್ರೀರಾಮ ರಾವಣ ಸಂಹಾರದ ನಂತರ ಹೃಷಿಕೇಶಕ್ಕೆ ಬಂದು ಇಲ್ಲಿ ತಪಸ್ಸನ್ನು ಆಚರಿಸಿದ್ದ. ಗಂಗೆಯನ್ನು ದಾಟುವುದಕ್ಕಾಗಿ ಲಕ್ಷ್ಮಣ ಸೇತುವೆಯನ್ನು ನಿರ್ಮಿಸಿದ್ದ, ಇದನ್ನೇ ಲಕ್ಷ್ಮಣ ಜೂಲಾ (Laxman Jhula) ಎಂದು ಕರೆಯಲಾಗುತ್ತದೆ.
1889ರಲ್ಲಿ ಕಬ್ಬಿಣದ ಸರಳುಗಳನ್ನು ಬಳಸಿ 248 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಲಾಗಿತ್ತು, ಆದರೆ ಅದು 1925ರಲ್ಲಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಯಿತು. 1927ರಲ್ಲಿ ಇಂದು ಕಾಣಸಿಗುವ ಲಕ್ಷ್ಮಣ ಜೂಲಾವನ್ನು ನಿರ್ಮಿಸಲಾಯಿತು. ಇನ್ನು 1986ರಲ್ಲಿ ಋಷಿಕೇಶದ ಶಿವಾನಂದ ನಗರದಲ್ಲಿ ರಾಮ್ ಜೂಲಾ (Ram Jhula) ಎಂಬ ಮತ್ತೊಂದು ಸೇತುವೆಯನ್ನು ನಿರ್ಮಿಸಲಾಗಿದೆ.
ಋಷಿಕೇಶ ರೈಲ್ವೇ ನಿಲ್ದಾಣದಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿ, ಗಂಗಾ ನದಿ ತೀರದಲ್ಲಿ ತ್ರಿವೇಣಿ ಘಾಟ್ (Triveni Ghat) ಇದೆ. ಇದು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಾನ ಎಂಬ ನಂಬಿಕೆ ಇದೆ. ಇಲ್ಲಿ ಗಂಗಾ ಸ್ನಾನ ಮಾಡುವುದರಿಂದ ಸಕಲ ಪಾಪಗಳು ಮತ್ತು ಶಾಪಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿ ಪ್ರತಿದಿನ ಸಂಜೆ ಗಂಗಾ ಆರತಿ (Ganga Aarti) ನಡೆಯುತ್ತದೆ.
ತ್ರಿವೇಣಿ ಘಾಟ್‌ನಿಂದ 500 ಮೀಟರ್ ದೂರದಲ್ಲಿ ಭಾರತ್ ಮಂದಿರ ಎಂಬ ಒಂದು ಪ್ರಾಚೀನ ದೇವಾಲಯ ಇದೆ. ಇದನ್ನು ಹೃಷಿಕೇಶ ನಾರಾಯಣ ಮಂದಿರ ಎಂದೂ ಕರೆಯಲಾಗುತ್ತದೆ. ಕೇದಾರಖಂಡದ ದಾಖಲೆಗಳ ಪ್ರಕಾರ ಇಲ್ಲಿನ ಮುಖ್ಯ ಗರ್ಭಗುಡಿಯನ್ನು 8ನೇ ಶತಮಾನದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಹೃಷಿಕೇಶ ನಾರಾಯಣ ಎಂದು ಕರೆಯಲ್ಪಡುವ ಈ ನಾರಾಯಣ ಮೂರ್ತಿಯನ್ನು ಒಂಟಿ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾಗಿದೆ.
ತ್ರಿವೇಣಿ ಘಾಟ್ ಸಮೀಪದಲ್ಲಿರುವ ಮತ್ತೊಂದು ದೇವಾಲಯ ರಘುನಾಥ ದೇವಾಲಯ. ಇದು ರಾಮ ಹಾಗೂ ಸೀತೆಗೆ ಸಮರ್ಪಿತವಾಗಿದೆ. ದೇವಾಲಯದ ಮುಂಭಾಗದಲ್ಲಿ ಒಂದು ಸಣ್ಣ ಕೆರೆಯಿದ್ದು, ಅದನ್ನು ರಿಷಿ ಕುಂಡ ಎಂದು ಕರೆಯಲಾಗುತ್ತದೆ.
ನರನಾರಾಯಣ ಪರ್ವತ ಶ್ರೇಣಿಯ ಮಡಿಲಲ್ಲಿ ಬರುವ ಮಣಿಕೂಟ, ವಿಷ್ಣುಕೂಟ ಹಾಗೂ ಬ್ರಹ್ಮಕೂಟ ಕಣಿವೆಗಳ ಮಧ್ಯೆ ಇರುವ ಕಾಡಿನಲ್ಲಿ ಶ್ರೀ ನೀಲಕಂಠ ಮಹಾದೇವ ಮಂದಿರ ಇದೆ. ಇಲ್ಲಿ ಪಂಕಜ ಹಾಗೂ ಮಧುಮತಿ ಎಂಬ ನದಿಗಳು ಸಂಗಮವಾಗುತ್ತವೆ. ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ ಸಮುದ್ರ ಮಥನದ ಸಂದರ್ಭದಲ್ಲಿ ಶಿವ ಹಾಲಾಹಲ ಎಂಬ ವಿಷವನ್ನು ಸೇವಿಸಿದ ಸ್ಥಳ ಇದು.
ಈ ಆಲಯಗಳ ಜೊತೆಗೆ ಪರಮಾರ್ಥ ನಿಕೇತನ, ಶಿವಾನಂದ ಆಶ್ರಮ, ಓಂಕಾರಾನಂದ ಆಶ್ರಮ, ಸ್ವರ್ಗಾಶ್ರಮ ಮೊದಲಾದ ಸ್ಥಳಗಳಿಗೂ ಭೇಟಿ ನೀಡಬಹುದು. ಋಷಿಕೇಶ ಕೇವಲ ತೀರ್ಥಕ್ಷೇತ್ರ ಮಾತ್ರವಲ್ಲ; ಇಲ್ಲಿಗೆ ಜನರು ಸಾಹಸ ಕ್ರೀಡೆಗಳಿಗಾಗಿ, ಟ್ರೆಕ್ಕಿಂಗ್ (Trekking) ಹಾಗೂ ವನವಿಹಾರಕ್ಕಾಗಿಯೂ ಭೇಟಿ ನೀಡುತ್ತಾರೆ. ಭಾರತದ ಮೊದಲ ಹಾಗೂ ಅತ್ಯಂತ ಎತ್ತರದ ಬಂಜಿ ಜಂಪಿಂಗ್ (Bungee Jumping) ಇರುವುದು ಋಷಿಕೇಶದಲ್ಲಿ. ಇಲ್ಲಿ ರಿವರ್ ರಾಫ್ಟಿಂಗ್ (River Rafting)ಗೂ ಹೋಗಬಹುದು. ನದಿ ಪಕ್ಕ ಕ್ಯಾಂಪಿಂಗ್ (Camping) ಮಾಡುವುದಕ್ಕೂ ಇಲ್ಲಿ ಅವಕಾಶ ಇದೆ. ಏಷ್ಯಾದ ಅತ್ಯಂತ ಉದ್ದದ ಫ್ಲೈಯಿಂಗ್ ಫಾಕ್ಸ್ (Flying Fox / Zipline) ಕೂಡ ಇರುವುದು ಋಷಿಕೇಶದಲ್ಲಿಯೇ. ಇದು ಸುಮಾರು 1 ಕಿಲೋಮೀಟರ್ ಉದ್ದವಿದ್ದು, ಗಂಟೆಗೆ 140 ಕಿಲೋಮೀಟರ್ ವೇಗವನ್ನು ಹೊಂದಿದೆ.
ಋಷಿಕೇಶ ತಲುಪುವುದು ಹೇಗೆ? (How to Reach Rishikesh)
ಋಷಿಕೇಶ ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 240 ಕಿಲೋಮೀಟರ್ ದೂರದಲ್ಲಿದೆ. ಇದಕ್ಕೆ ಅತ್ಯಂತ ಹತ್ತಿರವಿರುವ ಡೆಹ್ರಾಡೂನ್ ವಿಮಾನ ನಿಲ್ದಾಣ 15 ಕಿಲೋಮೀಟರ್ ದೂರದಲ್ಲಿದೆ. ಋಷಿಕೇಶಕ್ಕೆ ರೈಲ್ವೇ ಪ್ರಯಾಣ ಅತ್ಯಂತ ಸೂಕ್ತ ಎನಿಸಿಕೊಳ್ಳುತ್ತದೆ, ಏಕೆಂದರೆ ಇಲ್ಲಿನ ಹೆಚ್ಚಿನ ಪ್ರವಾಸಿ ತಾಣಗಳು ಈ ರೈಲ್ವೇ ನಿಲ್ದಾಣದ ಆಸುಪಾಸಿನಲ್ಲೇ ಇವೆ. ದೆಹಲಿಯಿಂದ ಋಷಿಕೇಶ 233 ಕಿಲೋಮೀಟರ್ ದೂರದಲ್ಲಿದ್ದರೆ, ಡೆಹ್ರಾಡೂನ್‌ನಿಂದ ರಸ್ತೆ ಮಾರ್ಗವಾಗಿ ಹೋಗುವುದಾದರೆ 43.7 ಕಿಲೋಮೀಟರ್. ಹರಿದ್ವಾರ 23.4 ಕಿಲೋಮೀಟರ್ ದೂರದಲ್ಲಿದ್ದರೆ, ಬದ್ರಿನಾಥ್ 281 ಕಿಲೋಮೀಟರ್ ದೂರದಲ್ಲಿದೆ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.