Global Affairs

ರಷ್ಯಾ-ಆಫ್ಗಾನಿಸ್ತಾನ Defense Deal..!

ರಷ್ಯಾ-ಆಫ್ಗಾನಿಸ್ತಾನ Defense Deal..!
ಇನ್ನು ಮುಂದೆ ಪಾಕಿಸ್ತಾನಕ್ಕೆ ನಿದ್ದೆ ಇಲ್ಲದ ರಾತ್ರಿಗಳು ಶುರುವಾಗಲಿವೆ. ಇಷ್ಟು ದಿನ TTP ಅಂದರೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸಂಘಟನೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಕೂಡಲೇ, ಪಾಕಿಸ್ತಾನ ಆಫ್ಗಾನಿಸ್ತಾನದ ಮೇಲೆ Air Strikes ನಡೆಸುತ್ತಿತ್ತು. ಅದನ್ನು ಸರಿಯಾಗಿ ನಿಯಂತ್ರಿಸಲು ಬೇಕಾದ ವ್ಯವಸ್ಥೆಗಳಿಲ್ಲದೆ ಆಫ್ಗಾನಿಸ್ತಾನ ಒದ್ದಾಡಬೇಕಾಗಿ ಬರುತ್ತಿತ್ತು; ಪಾಕಿಸ್ತಾನದ ಮೇಲಿನ ತನ್ನ ಪ್ರತಿದಾಳಿಯ ಸ್ವಾತಂತ್ರ್ಯವನ್ನೂ ಅವರು ಕಡಿಮೆ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು. ಆದರೆ ಇನ್ನು ಮುಂದೆ ಪರಿಸ್ಥಿತಿ ಬದಲಾಗಲಿದೆ; ಆಫ್ಗಾನಿಸ್ತಾನಕ್ಕೆ ಬೇಕಾದ Weapons ಮತ್ತು Military Equipmentಗಳನ್ನು ರಷ್ಯಾ ಪೂರೈಸಲಿದೆ.
ಹಾಗಂತ ಅವರು ಆಯುಧಗಳನ್ನು ಅಮೆರಿಕಾದ ಥರ ದಾನವಾಗಿ ಅಥವಾ ಸಾಲದ ರೂಪದಲ್ಲಿ ಕೊಡುವ ಸ್ಥಿತಿಯಲ್ಲಿ ಈಗ ಇಲ್ಲ. ಆಫ್ಗಾನಿಸ್ತಾನ ಆ ಆಯುಧಗಳನ್ನು ರಷ್ಯಾದಿಂದ ಖರೀದಿಯನ್ನೇ ಮಾಡಬೇಕು. ಆದರೆ ಅಷ್ಟೊಂದು ಹಣ ಆಫ್ಗಾನಿಸ್ತಾನದ ಬಳಿ ಇದೆಯಾ? ಅಥವಾ ಅಲ್ಲೂ ಯಾರಾದರೂ ಆಫ್ಗಾನಿಸ್ತಾನದ ಹಿಂದೆ ನಿಂತು ರಷ್ಯಾದ ಮೂಲಕ ಆಯುಧ ಕೊಡಿಸುತ್ತಿದ್ದಾರಾ ಎಂಬುದು ಸ್ಪಷ್ಟವಿಲ್ಲ. ಆದರೆ, ರಷ್ಯಾ ಹಾಗೂ ಆಫ್ಗಾನಿಸ್ತಾನದ ನಡುವೆ ಇಂಥದ್ದೊಂದು ಆಯುಧ ಸರಬರಾಜಿಗೆ ಸಂಬಂಧಿಸಿದ Defense Agreement ಆದ ಸಂದರ್ಭದಲ್ಲೇ, ಭಾರತದ NSA ಅಜಿತ್ ದೋವಲ್ ರಷ್ಯಾದಲ್ಲಿದ್ದಾರೆ. ಅವರು ಅಲ್ಲಿ ಮ್ಯಾನ್ಮಾರ್‌ನ NSA ಜೊತೆಗೂ ಮಾತುಕತೆ ನಡೆಸಿದ್ದಾರೆ.
ಹಾಗಾದರೆ ರಷ್ಯಾದಲ್ಲಿ ಏನಾಗುತ್ತಿದೆ? ಅಮೆರಿಕಾ ಪಾಕಿಸ್ತಾನದ ವಿದೇಶಾಂಗ ಸಚಿವರನ್ನು ತನ್ನಲ್ಲಿಗೆ ಕರೆಸಿಕೊಂಡಿರುವ ಸಂದರ್ಭದಲ್ಲಿ, ಭಾರತದ ಹಿತ್ತಲಿನಲ್ಲಿ ಅಮೆರಿಕಾ ತನ್ನ ಹಿಡಿತ ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಎನ್‌ಎಸ್‌ಎ ಅಜಿತ್ ದೋವಲ್ ರಷ್ಯಾಗೆ ಭೇಟಿ ಕೊಟ್ಟಿರುವುದು ಯಾಕೆ? ಅಲ್ಲಿ ಮ್ಯಾನ್ಮಾರ್ ಜೊತೆ ಮಾತುಕತೆ ಏಕೆ? ಹಾಗೇ ಆಫ್ಗಾನಿಸ್ತಾನ ರಷ್ಯಾದಿಂದ Arms Purchase ಮಾಡಲು ಹಣ ಎಲ್ಲಿಂದ ಬರುತ್ತಿದೆ, ಮತ್ತು ರಷ್ಯಾದ ಆಯುಧಗಳು ಆಫ್ಗನ್ ನೆಲಕ್ಕೆ ಬಂದರೆ ಪಾಕಿಸ್ತಾನದ ಪರಿಸ್ಥಿತಿ ಏನಾಗುತ್ತದೆ?
ರಷ್ಯಾ-ತಾಲಿಬಾನ್ ಸಂಬಂಧ: ಶತ್ರುತ್ವದಿಂದ ಸ್ನೇಹದವರೆಗೆ
International Relations ಯಾವಾಗ ಹೇಗೆ ಬದಲಾಗುತ್ತವೆ ಎಂಬುದನ್ನು ಊಹಿಸುವುದು ತುಂಬಾ ಕಷ್ಟ. ಅಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎಂಬುದು ಎಷ್ಟು ನಿಜವೋ, ಅಲ್ಲಿ ಯಾವುದೂ ಆಕಸ್ಮಿಕವಾಗಿ ಅಥವಾ ಕಾಕತಾಳೀಯವಾಗಿ ನಡೆಯುವುದಿಲ್ಲ ಎಂಬುದೂ ಅಷ್ಟೇ ನಿಜ. ಎಲ್ಲದರ ಹಿಂದೆಯೂ ಲೆಕ್ಕಾಚಾರ, ಸಮಯ ಮತ್ತು ಪ್ಲಾನಿಂಗ್ ಇರುತ್ತದೆ; ಆಗಲೇ ಆಟ ಸುಸೂತ್ರವಾಗಿ ನಡೆಯುತ್ತದೆ.
ಒಂದು ಕಾಲದಲ್ಲಿ ರಷ್ಯಾದ ವಿರುದ್ಧ ಹೋರಾಟಕ್ಕಾಗಿಯೇ ಹುಟ್ಟಿಕೊಂಡಿದ್ದು ತಾಲಿಬಾನ್; ಅವರನ್ನು ಹುಟ್ಟುಹಾಕಿದ್ದು ಅಮೆರಿಕಾ ಹಾಗೂ ಪಾಕಿಸ್ತಾನ. ಈಗ ಅದೇ ತಾಲಿಬಾನ್ ಅಮೆರಿಕಾದ ನೆರಳು ಕಂಡರೂ ಸಿಡಿಮಿಡಿಗೊಳ್ಳುತ್ತದೆ. ಪಾಕಿಸ್ತಾನ ಮತ್ತು ತಾಲಿಬಾನ್ ನಡುವೆ ಎಣ್ಣೆ-ಸೀಗೇಕಾಯಿ ಸಂಬಂಧ; ಆದರೆ ಯಾವ ರಷ್ಯಾ ವಿರುದ್ಧ ಅವರು ಹೋರಾಡಿದ್ದರೋ, ಅದೇ ರಷ್ಯಾ ಇವತ್ತು ತಾಲಿಬಾನ್ ಜೊತೆ ಆತ್ಮೀಯ ಸಂಬಂಧ ಹೊಂದಿದೆ. ಆಫ್ಗಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಮೊದಲ ಬಾರಿಗೆ Recognition ಕೊಟ್ಟಿದ್ದೂ ರಷ್ಯಾನೇ. ಈಗ ತಾಲಿಬಾನ್ ಆಡಳಿತದ ಜೊತೆಗೆ ರಕ್ಷಣಾ ಸಂಬಂಧಗಳಿಗೆ ಸಹಿ ಹಾಕಿದ ಜಗತ್ತಿನ ಮೊದಲ ದೇಶ ಎಂಬ ಹೆಗ್ಗಳಿಕೆಗೂ ರಷ್ಯಾ ಪಾತ್ರವಾಗುತ್ತಿದೆ. ಈ ಮೂಲಕ Central Asiaದಲ್ಲಿ ರಷ್ಯಾ ಮತ್ತೆ ತನ್ನ ಕಾಲುಗಳನ್ನು ಭದ್ರವಾಗಿ ಊರುತ್ತಿದೆ.
ಮಿಲಿಟರಿ ಟೆಕ್ನಿಕಲ್ ಕೋ-ಆಪರೇಷನ್ ಅಗ್ರಿಮೆಂಟ್ ಎಂದರೇನು?
ರಷ್ಯಾ ಹಾಗೂ ಆಫ್ಗಾನಿಸ್ತಾನಗಳ ನಡುವೆ Military Technical Cooperation Agreementಗೆ ಸಹಿ ಬಿದ್ದಿದೆ. ಮಾಸ್ಕೋದಲ್ಲಿ ನಡೆಯುತ್ತಿರುವ International Security Forum ಸಭೆಯ ಸಂದರ್ಭದಲ್ಲೇ ಈ ಒಪ್ಪಂದ ಆಫ್ಗಾನಿಸ್ತಾನ ಹಾಗೂ ರಷ್ಯಾಗಳ ನಡುವೆ ಆಗಿದೆ. ಮಿಲಿಟರಿ ಟೆಕ್ನಿಕಲ್ ಕೋ-ಆಪರೇಷನ್ ಅಗ್ರಿಮೆಂಟ್ ಸಾಮಾನ್ಯವಾಗಿ Arms Sales, ಆಯುಧ ತಂತ್ರಜ್ಞಾನದ ಜಂಟಿ ತಯಾರಿ, License ಪಡೆದು ಆಯುಧ ತಯಾರಿಸಲು ಅವಕಾಶ, ತರಬೇತಿ, ಮತ್ತು ಆಯುಧಗಳ Maintenance ನಂಥ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ.
ಆಫ್ಗಾನಿಸ್ತಾನದ ತಾಲಿಬಾನ್ ಆಡಳಿತದ ಬಳಿ ದೊಡ್ಡ ಮಟ್ಟದ ಆಯುಧಗಳಿಲ್ಲ. ತಾವೇ Drones ತಯಾರಿಸುತ್ತಿದ್ದೇವೆ ಎಂದು ಅವರು ಹೇಳಿಕೊಂಡರೂ, ಅಂಥ ದೊಡ್ಡ ತಂತ್ರಜ್ಞಾನ ನಿರ್ಮಿಸಲು ಬೇಕಾದ ವ್ಯವಸ್ಥೆಗಳು ಅಲ್ಲಿಲ್ಲ. ಸದ್ಯಕ್ಕೆ ಅಮೆರಿಕಾ ಅಲ್ಲಿ ಬಿಟ್ಟುಹೋದ ಆಯುಧಗಳನ್ನು ಮತ್ತು ಈ ಹಿಂದೆ ವಿವಿಧ ಮೂಲಗಳಿಂದ ಸಂಗ್ರಹಿಸುತ್ತಿದ್ದ ಅದೇ ಮಾರ್ಗಗಳ ಮೂಲಕ ಈಗಲೂ ಅವರು ಆಯುಧ ಖರೀದಿ ಮಾಡುತ್ತಿದ್ದಾರೆ. ಆದರೆ ಅದನ್ನೇ ನಂಬಿಕೊಂಡು ಹೆಚ್ಚು ದಿನ ಇರಲು ಸಾಧ್ಯವಿಲ್ಲ.
ಅಲ್ಲಿ ಪಾಕಿಸ್ತಾನದ ಜೊತೆ ಆಫ್ಗಾನಿಸ್ತಾನಕ್ಕೆ ಸಂಘರ್ಷ ಇದೆ. ಹಾಗೇ Bagram Air Base ಮೇಲೆ ಅಮೆರಿಕಾ ಕಣ್ಣಿಟ್ಟುಕೊಂಡಿದೆ; ಅದಕ್ಕಾಗಿ ಟ್ರಂಪ್ ತಮ್ಮ ನೆಚ್ಚಿನ ಫೀಲ್ಡ್ ಮಾರ್ಷಲ್‌ರನ್ನು ಆಫ್ಗಾನಿಸ್ತಾನದ ವಿರುದ್ಧ ಛೂ ಬಿಡುತ್ತಾರೆ. ಇನ್ನು TTP ಅಂದರೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಸಕ್ರಿಯವಾಗಿದೆ; ಅದು ಆಫ್ಗಾನಿಸ್ತಾನದ ನೆಲದಿಂದ ಕೆಲಸ ಮಾಡುತ್ತದೆ ಎಂದು ಪಾಕಿಸ್ತಾನ ಆರೋಪಿಸುತ್ತದೆ. ಆ ಸಂಘಟನೆಯನ್ನು ನಿಯಂತ್ರಿಸಿ ಎಂದು ಅವರು ಆಫ್ಗಾನಿಸ್ತಾನಕ್ಕೆ ಹೇಳುತ್ತಾರೆ. ಆದರೆ ಆಫ್ಗನ್ ತಾಲಿಬಾನ್, "TTP ಗೂ ನಮಗೂ ಸಂಬಂಧ ಇಲ್ಲ, ಅದು ನಿಮ್ಮ ಆಂತರಿಕ ವಿಷಯ, ನೀವೇ ಸರಿಪಡಿಸಿಕೊಳ್ಳಿ, ನಮ್ಮ ವರೆಗೆ ಅದನ್ನು ತರಬೇಡಿ" ಎಂದು ಹೇಳುತ್ತದೆ.
ಇತ್ತೀಚೆಗೆ ಪಾಕಿಸ್ತಾನ ತನ್ನಲ್ಲಿನ ಆಫ್ಗನ್ ನಾಗರಿಕರನ್ನು ಹೊರಹಾಕುವ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಿತು; ಅದು ಫಲಿಸದಿದ್ದಾಗ ಆಫ್ಗಾನಿಸ್ತಾನದ ಮೇಲೆ ವಾಯುದಾಳಿಗಳನ್ನೂ ನಡೆಸಿತು. ಅದಕ್ಕೆ ಪ್ರತಿಯಾಗಿ ಆಫ್ಗನರೂ ಪಾಕಿಸ್ತಾನದ ಚೆಕ್‌ಪೋಸ್ಟ್‌ಗಳನ್ನು, ಗಡಿ ಪೋಸ್ಟ್‌ಗಳನ್ನು Tanks ಮತ್ತು Artillery ಬಳಸಿ ನಾಶಪಡಿಸಿದರು; ಪಾಕಿಸ್ತಾನದ ಒಳಗೆ ಕೆಲ Drone Attacksಗಳನ್ನೂ ನಡೆಸಿದರು. ಆಫ್ಗನ್ ಯೋಧರಲ್ಲಿ ಹೋರಾಟದ ಕೆಚ್ಚು ಇದ್ದರೂ, ಆಯುಧಗಳ ವಿಷಯದಲ್ಲಿ ಪಾಕಿಸ್ತಾನದ ವಾಯುಪಡೆ ದಾಳಿ ಆರಂಭಿಸಿದರೆ ಅದನ್ನು ಎದುರಿಸುವುದು ಆಫ್ಗಾನಿಸ್ತಾನಕ್ಕೆ ಕಷ್ಟ. ಅವರ ಬಳಿ ಸರಿಯಾದ Air Defense ವ್ಯವಸ್ಥೆ ಇಲ್ಲ; ಹಳೆಯ Anti-Aircraft Guns ಮತ್ತು Shoulder-Fired Pods ಬಳಸುತ್ತಾರೆ, ಆದರೆ ಅದು ಪಾಕಿಸ್ತಾನದ ವಾಯುಪಡೆಯ ವಿರುದ್ಧ ಸಾಕಾಗುತ್ತಿಲ್ಲ. ಹೀಗಾಗಿ ಆಯುಧ ಕೊಡಿ ಎಂದು ಅವರು ರಷ್ಯಾವನ್ನು ಕೇಳುತ್ತಿದ್ದರೂ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ.
ಈಗ ಆಫ್ಗಾನಿಸ್ತಾನ ಹಾಗೂ ರಷ್ಯಾ ನಡುವೆ Defense Agreement ಆಗಿದೆ. ಅಲ್ಲಿಂದ ಆಫ್ಗಾನಿಸ್ತಾನ ಯಾವ ಆಯುಧಗಳನ್ನು ಖರೀದಿ ಮಾಡುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪ್ರಮುಖವಾಗಿ ಅವರು Air Defense, Igla-type MANPADS, ಕೆಲ Rockets ಮತ್ತು Missilesಗಳನ್ನು ಖರೀದಿಸಬಹುದು ಎನ್ನಲಾಗುತ್ತಿದೆ. ಹಾಗೇ ರಷ್ಯಾ ಇರಾನ್‌ಗೆ ಯಾವ ಆಯುಧಗಳನ್ನು ಪೂರೈಸಿದೆಯೋ ಅದೇ ಆಯುಧಗಳನ್ನು ತಮಗೂ ಕೊಡಿ ಎಂದು ಆಫ್ಗಾನಿಸ್ತಾನ ಕೇಳುವ ಸಾಧ್ಯತೆಯೂ ಇದೆ.
ರಷ್ಯಾದ ಆಯುಧಗಳು ಆಫ್ಗಾನಿಸ್ತಾನಕ್ಕೆ ಸರಬರಾಜಾಗಲು ಶುರುವಾದರೆ, ಅದರಿಂದ ನಿದ್ದೆ ಗೆಡುವುದು ಪಾಕಿಸ್ತಾನವಲ್ಲದೆ ಬೇರೆ ಯಾರೂ ಅಲ್ಲ. ಆಫ್ಗಾನಿಸ್ತಾನದ ಬಳಿ ಏರ್ ಡಿಫೆನ್ಸ್ ಹಾಗೂ ಮಿಸೈಲುಗಳು ಬಂದರೆ, ಪಾಕಿಸ್ತಾನದ ಯುದ್ಧ ವಿಮಾನಗಳಿಗೆ ಆಫ್ಗಾನಿಸ್ತಾನದ ಆಕಾಶದಲ್ಲಿ ಹಾರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಪಾಕಿಸ್ತಾನದ ನೆಲದ ಮೇಲೆ ಆಫ್ಗಾನಿಸ್ತಾನ ರಾಕೆಟ್ ದಾಳಿ ಶುರುಮಾಡಬಹುದು ಎಂಬ ಭಯ ಪಾಕಿಸ್ತಾನಕ್ಕೂ ಶುರುವಾದರೆ, ಅಲ್ಲಿ ಒಂದು Deterrence ನಿರ್ಮಾಣವಾಗುತ್ತದೆ. ಆಗ, "TTP ಕೆಲಸ TTPದು, ಅದರ ಹೆಸರು ಹೇಳಿಕೊಂಡು ನೀವು ನಮ್ಮ ಮೇಲೆ ದಾಳಿ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಆಫ್ಗಾನಿಸ್ತಾನ ಧೈರ್ಯವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಡಲು ಇದು ಅವಕಾಶ ಕಲ್ಪಿಸಿಕೊಡುತ್ತದೆ.
ಆಯುಧಗಳಿಗೆ ಹಣ ಕೊಡುತ್ತಿರುವವರು ಯಾರು?
ಈ ಆಯುಧಗಳನ್ನು ಖರೀದಿಸಲು ಬೇಕಾದ ಹಣ ಆಫ್ಗಾನಿಸ್ತಾನದಲ್ಲಿ ಇದೆಯಾ? ರಷ್ಯಾ ಸದ್ಯದ ಪರಿಸ್ಥಿತಿಯಲ್ಲಿ ಏನನ್ನೂ ದಾನವಾಗಿ ಕೊಡುವ ಸ್ಥಿತಿಯಲ್ಲಿಲ್ಲ; ಯುದ್ಧನಿರತ ದೇಶವಾದ ಅವರಿಗೆ ಈಗ ಎಷ್ಟು ಹಣ ಸಿಕ್ಕರೂ ಸಾಕಾಗುವುದಿಲ್ಲ. ಸೋ, ಆಫ್ಗಾನಿಸ್ತಾನಕ್ಕೆ ರಷ್ಯಾ ಕೊಡುತ್ತಿರುವ ಆಯುಧಗಳಿಗೆ ಹಣ ಯಾರು ಕೊಡುತ್ತಿದ್ದಾರೆ ಎಂಬ ಪ್ರಶ್ನೆಗೆ ನಿಖರ ಉತ್ತರ ಸಿಗುತ್ತಿಲ್ಲ.
ಆದರೆ, ಈ ಒಪ್ಪಂದ ಆದ ಮರುದಿನ, ಅಂದರೆ ಮೇ 27ರಂದು ಆಫ್ಗಾನಿಸ್ತಾನದ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ರಷ್ಯಾದ NSA ಶೋಯ್ಗು ಸಹಿ ಹಾಕುತ್ತಾರೆ. ಅದರ ಮರುದಿನ, ಅಂದರೆ ಮೇ 28ರಂದು ಮಾಸ್ಕೋದಲ್ಲಿ ಭಾರತದ NSA ಅಜಿತ್ ದೋವಲ್ ಇರುತ್ತಾರೆ. ಅಲ್ಲಿ ರಷ್ಯಾ ಹಾಗೂ ಭಾರತದ NSA ನಡುವೆ ಮಾತುಕತೆಗಳಾಗುತ್ತವೆ; ಆ ಸಂದರ್ಭದಲ್ಲಿ Energy, Space, Defense ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ ಅಜಿತ್ ದೋವಲ್, Terrorism ಮತ್ತು ಅದಕ್ಕೆ ಬೆಂಬಲ ಕೊಡುವವರ ಬಗ್ಗೆಯೂ ಮಾತನಾಡುತ್ತಾರೆ. ಅವರು ಅಲ್ಲಿ ಟಾರ್ಗೆಟ್ ಮಾಡಿಕೊಂಡಿದ್ದು ಪಾಕಿಸ್ತಾನವನ್ನೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ISKP ಮತ್ತು ಸೆಂಟ್ರಲ್ ಏಷ್ಯಾಕ್ಕೆ ಬೆಳೆಯುತ್ತಿರುವ ಥ್ರೆಟ್
ಪಾಕಿಸ್ತಾನ ಕೇವಲ ಭಾರತಕ್ಕೆ ಮಾತ್ರ Terrorists ಕಳುಹಿಸುತ್ತಿಲ್ಲ. ಅವರು ಮಾಡುತ್ತಿರುವ ಕೆಲಸಗಳು ಈಗ ರಷ್ಯಾಗೆ ಮತ್ತು ಇಡೀ Central Asiaಗೆ Threat ಆಗಿ ಪರಿಣಮಿಸುತ್ತಿವೆ. ಸೆಂಟ್ರಲ್ ಏಷ್ಯಾ ಎಂಬುದು ರಷ್ಯಾದ ಹಿತ್ತಲು; ಸೋವಿಯತ್ ಪತನದ ನಂತರವೂ ರಷ್ಯಾ ಈ ಭಾಗದಲ್ಲಿ ತನ್ನದೇ ಆದ ಹಿಡಿತ ಇಟ್ಟುಕೊಂಡಿದೆ. ಇಂಥ ಸೆಂಟ್ರಲ್ ಏಷ್ಯಾದಲ್ಲಿ ಈಗ ISIS-Khorasan (ISKP)ದ ಪ್ರಭಾವ ಹೆಚ್ಚಾಗುತ್ತಿದೆ. ತಜಕಿಸ್ತಾನ, ಕಝಕಿಸ್ತಾನ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ ಮಾತ್ರವಲ್ಲ, ಈಗ ರಷ್ಯಾಗೂ ISKP ಕಾಲಿಡುತ್ತಿದೆ. ಇತ್ತೀಚೆಗೆ ಅಲ್ಲೂ Terrorist Attacks ನಡೆದಿವೆ. ಸೋ, ISKP ಅನ್ನು ಮಟ್ಟ ಹಾಕಬೇಕಾದ ಅಗತ್ಯ ರಷ್ಯಾಗೂ ಕಾಣಿಸುತ್ತಿದೆ.
ಇಲ್ಲಿ ISIS ಉಗ್ರರನ್ನು ಸೆಂಟ್ರಲ್ ಏಷ್ಯಾದಲ್ಲಿ ಸಾಕುತ್ತಿರುವುದು ಯಾರು? ಪಾಕಿಸ್ತಾನ. ಪಾಕಿಸ್ತಾನ ಬಲೂಚ್ ಭಾಗದಲ್ಲಿ ಅವರನ್ನು ತಂದು ಪ್ರತಿಷ್ಠಾಪಿಸಿದೆ ಅಷ್ಟೇ ಅಲ್ಲ, ಆಫ್ಗಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಈ ISIS ಬಲ ಹೆಚ್ಚಿಸಿಕೊಳ್ಳಲು ಬೇಕಾದ ಆಯುಧ ಹಾಗೂ ಇನ್ನಿತರ ವ್ಯವಸ್ಥೆಗಳನ್ನೂ ಪಾಕಿಸ್ತಾನ ಮಾಡುತ್ತಿದೆ. ಅವರಿಗೆ ಪಾಕಿಸ್ತಾನದಲ್ಲಿನ Lashkar ಮತ್ತು Jaish ನಂಥ ಸಂಘಟನೆಗಳ ಜೊತೆ ದೋಸ್ತಿ ಮಾಡಿಸಲಾಗಿದೆ. ನಾಳೆ ಕಾಶ್ಮೀರಕ್ಕೂ ISIS ಕಳುಹಿಸಬೇಕು ಎಂಬುದು ಪಾಕಿಸ್ತಾನದ ಯೋಜನೆ.
ISIS ಕಾಶ್ಮೀರಕ್ಕೆ ಬರುತ್ತದೆ ಎಂಬುದು ಭಾರತದ ಆತಂಕ. ಆಫ್ಗಾನಿಸ್ತಾನದಲ್ಲಿ ಈಗಾಗಲೇ ಅದು ಬಂದಾಗಿದೆ; ಅದರ ವಿರುದ್ಧ ತಾಲಿಬಾನಿಗಳು ಹೋರಾಟ ಮಾಡುತ್ತಿದ್ದಾರೆ. ಬಲೂಚ್ ಭಾಗದಲ್ಲಿ Liberation Armyಯ ವಿರುದ್ಧವೂ ಪಾಕಿಸ್ತಾನ ISIS ಮೂಲಕವೇ ದಾಳಿ ಮಾಡಿಸುತ್ತಿದೆ. ಇದೇ ISIS ಈಗ ಸೆಂಟ್ರಲ್ ಏಷ್ಯಾ ಮೂಲಕ ರಷ್ಯಾದ ವರೆಗೂ ವಿಸ್ತರಿಸುತ್ತಿದೆ. ಹೀಗಾಗಿ ಅದನ್ನು ಮಟ್ಟ ಹಾಕಬೇಕಾದ ಅಗತ್ಯ ಭಾರತ, ರಷ್ಯಾ ಮತ್ತು ಆಫ್ಗಾನಿಸ್ತಾನ ಮೂರೂ ದೇಶಗಳಿಗೆ ಅನಿವಾರ್ಯವಾಗಿದೆ. ಮುಂದೆ ರಷ್ಯಾ ವಿರುದ್ಧ ಪಶ್ಚಿಮದ ದೇಶಗಳೂ ISIS ಗೆ ಸಹಾಯ ಮಾಡುವ ಸಾಧ್ಯತೆ ಇದೆ ಎಂಬುದು ರಷ್ಯಾಗೂ ಗೊತ್ತಿದೆ. ಸೋ, ISIS ವಿರುದ್ಧ ಹೋರಾಡಲು ಅವರು ಆಫ್ಗಾನಿಸ್ತಾನವನ್ನು ಬಲಪಡಿಸಬೇಕು; ಅದಕ್ಕೂ ಆಯುಧ ಕೊಡಬೇಕು. ಆದರೆ ಆ ಆಯುಧಗಳಿಗೆ ಹಣ ಯಾರು ಕೊಡುತ್ತಿದ್ದಾರೆ? ಭಾರತವೇ? ಭಾರತ ಯಾಕೆ ಕೊಡುತ್ತದೆ? ಒಂದುವೇಳೆ ಭಾರತಕ್ಕೆ ಅಂಥ ಆಸಕ್ತಿ ಇದ್ದರೆ, ತನ್ನದೇ ಆದ Akash, Pinaka ಕ್ಷಿಪಣಿಗಳನ್ನು, Anti-Drone Systemsಗಳನ್ನು, ಡ್ರೋನ್‌ಗಳನ್ನೂ ಆಫ್ಗಾನಿಸ್ತಾನಕ್ಕೆ ಭಾರತವೇ ಕೊಡಬಹುದಲ್ಲ?
ಇಲ್ಲ, ಇಲ್ಲಿ ಅವರಿಗೆ ಆಯುಧ ಕೊಡಲು ಒಂದು ಸಣ್ಣ ತಾಂತ್ರಿಕ ತೊಂದರೆ ಇದೆ. ಭಾರತ ಆಫ್ಗಾನಿಸ್ತಾನಕ್ಕೆ Recognition ಕೊಟ್ಟಿಲ್ಲ. ಹೀಗಾಗಿ ಅವರ ಜೊತೆ ರಕ್ಷಣಾ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾನ್ಯತೆ ಕೊಡಲು ಕೆಲ ಅಂತಾರಾಷ್ಟ್ರೀಯ ಒತ್ತಡಗಳು ಮತ್ತು ಕಾನೂನುಗಳೂ ಅಡ್ಡಿಯಾಗಿವೆ. ಸೋ, ಮಾನ್ಯತೆ ಕೊಟ್ಟ ನಂತರವಷ್ಟೇ ಭಾರತ ಅವರಿಗೆ ನೇರವಾಗಿ ಆಯುಧ ಸರಬರಾಜು ಮಾಡುತ್ತದೆ; ಈಗ ಅದನ್ನು ಮಾಡುವುದಿಲ್ಲ. ಆದರೆ ಬೇರೆಯವರ ಮೂಲಕ ಮಾಡಿಸುವುದಕ್ಕೆ ಸಮಸ್ಯೆ ಇಲ್ಲ.
ಭಾರತಕ್ಕೆ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಆಯಾಮ
ಭಾರತಕ್ಕೆ ಪಾಕಿಸ್ತಾನದ ಮತ್ತೊಂದು ಬದಿಯಲ್ಲಿ ಅವರಿಗೆ ಚೆಕ್ ಇಡಬೇಕಾದ ಅಗತ್ಯವೂ ಇದೆ. ಬಾಂಗ್ಲಾದೇಶದ ಜೊತೆ ಪಾಕಿಸ್ತಾನದ ಸಂಬಂಧಗಳು ಗಟ್ಟಿಯಾಗುತ್ತಿರುವ ಈ ಸಂದರ್ಭದಲ್ಲಿ, ಅವರ ಮತ್ತೊಂದು ಗಡಿಯನ್ನೂ Engage ಮಾಡಬೇಕಾಗುತ್ತದೆ. ಸದ್ಯಕ್ಕೆ ಆಫ್ಗಾನಿಸ್ತಾನದಲ್ಲಿ ಚೈನಾದ ಪ್ರಭಾವ ಹೆಚ್ಚಾಗುತ್ತಿದೆ; ಅಲ್ಲಿಗೆ ರಷ್ಯಾ ಕಾಲಿಟ್ಟರೆ ಆಫ್ಗಾನಿಸ್ತಾನಕ್ಕೆ ಹೆಚ್ಚಿನ ಆಯ್ಕೆಗಳು ಸಿಕ್ಕಂತಾಗುತ್ತದೆ; ಅದು ಭಾರತದ ದೃಷ್ಟಿಯಿಂದಲೂ ತುಂಬಾ ಅಗತ್ಯ ಎನಿಸಿಕೊಳ್ಳುತ್ತದೆ.
ಹಾಗೇ ಬಾಂಗ್ಲಾದೇಶದಲ್ಲಿ ಅಮೆರಿಕಾದ ಹಸ್ತಕ್ಷೇಪ ಹೆಚ್ಚಾಗುತ್ತಿದೆ; ಅವರು ಬಾಂಗ್ಲಾದೇಶದ ಮೂಲಕ ಮ್ಯಾನ್ಮಾರ್ ಅನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ. ಭಾರತದ ಸುತ್ತ ಒಂದು ಅಸಹನೆ ಮತ್ತು ಆತಂಕದ ವರ್ತುಲ ಸೃಷ್ಟಿಸುವ ಪ್ರಯತ್ನವನ್ನು ಅಮೆರಿಕಾ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಮ್ಯಾನ್ಮಾರ್ ಜೊತೆಗೂ ಭಾರತಕ್ಕೆ ಉತ್ತಮ ಸಂಬಂಧಗಳ ಅಗತ್ಯ ಇದೆ. ಮ್ಯಾನ್ಮಾರ್‌ನಲ್ಲಿ ಅತಿ ಹೆಚ್ಚು Rare Earth Minerals ಇವೆ; ಅವುಗಳಿಗಾಗಿಯೇ ಮ್ಯಾನ್ಮಾರ್ ಈಗ ಅಮೆರಿಕಾ ಹಾಗೂ ಚೈನಾ ನಡುವಿನ ಸ್ಪರ್ಧೆಯ ಕಣವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮ್ಯಾನ್ಮಾರ್ ಜೊತೆಗಿನ ಸಂಬಂಧ ಸರಿಪಡಿಸಿಕೊಳ್ಳುವುದರಲ್ಲಿ ಭಾರತಕ್ಕೆ ಲಾಭ ಇದೆ.
ಮ್ಯಾನ್ಮಾರ್ ಭಾರತದ ಈಶಾನ್ಯ ರಾಜ್ಯಗಳ ಜೊತೆ ಗಡಿ ಹಂಚಿಕೊಳ್ಳುತ್ತದೆ; ಅಲ್ಲಿಂದ ಉಗ್ರರು ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ಸದಸ್ಯರು ನುಸುಳುವುದು ಹೆಚ್ಚು. ಭಾರತ ಮತ್ತು ಮ್ಯಾನ್ಮಾರ್ ಎರಡೂ ಕಡೆ ಕೆಲಸ ಮಾಡುವ ಕೆಲ ಸಂಘಟನೆಗಳೂ ಅಲ್ಲಿವೆ. ಈ ಭಾಗದಲ್ಲಿ ಆಯುಧ ಮತ್ತು Drug Smuggling ಜಾಲ ಕೂಡ ಕೆಲಸ ಮಾಡುತ್ತಿದೆ; ಅದನ್ನು ನಿಯಂತ್ರಿಸಲು ಒಂದು ಜಂಟಿ ಕಾರ್ಯಾಚರಣೆಯ ಅಗತ್ಯವಿದೆ. ಹೀಗಾಗಿ ಭಾರತ-ಮ್ಯಾನ್ಮಾರ್ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಬೇಕಿದೆ. ಸೋ, ಆ ನಿಟ್ಟಿನಲ್ಲಿ ಅಜಿತ್ ದೋವಲ್ ಹಾಗೂ ಮ್ಯಾನ್ಮಾರ್ NSA ನಡುವೆ ಮಾತುಕತೆಗಳೂ ಆಗಿವೆ. ಮ್ಯಾನ್ಮಾರ್ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಕೂಡ ಐದು ದಿನಗಳ ಭಾರತ ಭೇಟಿಯನ್ನು ಹಮ್ಮಿಕೊಂಡಿದ್ದಾರೆ; ಅವರು ಭಾರತದ ಪ್ರಧಾನಿಯ ಜೊತೆ ದ್ವಿಪಕ್ಷೀಯ ಮಾತುಕತೆ ಹಾಗೂ ಕೆಲ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯೂ ಇದೆ.
ಇದೆಲ್ಲವೂ ಭಾರತದ ರಕ್ಷಣೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಗಳು ಎನಿಸಿಕೊಳ್ಳುತ್ತಿದ್ದರೆ, ರಷ್ಯಾ ಹಾಗೂ ಆಫ್ಗನ್ ರಕ್ಷಣಾ ಒಪ್ಪಂದ ಪಾಕಿಸ್ತಾನದ ಎದೆಯಲ್ಲಿ ಪಟಾಕಿ ಸಿಡಿಸುವುದಕ್ಕೆ ಕಾರಣವಾಗುತ್ತಿದೆ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.