ನಿಮಗೆ ರಾಮಾಯಣ (Ramayana)ದ ಕಥೆ ಗೊತ್ತಲ್ವಾ? ಅದರಲ್ಲಿ ಬರುವ ಪಾತ್ರಗಳಲ್ಲಿ ಅತಿ ಹೆಚ್ಚು ಬಲಶಾಲಿ ಯಾರು ಎಂದರೆ, ಕೆಲವರು ರಾಮ ಎನ್ನಬಹುದು, ಮತ್ತೂ ಕೆಲವರು ರಾವಣ ಎನ್ನಬಹುದು, ಇನ್ನು ಕೆಲವರು ಹನುಮ ಎನ್ನಲೂಬಹುದು. ಆದರೆ ಇಡೀ ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ರಾಮ-ರಾವಣರಿಗಿಂತಲೂ, ಭರತ-ಲಕ್ಷ್ಮಣರಿಗಿಂತಲೂ ಶಕ್ತಿಶಾಲಿಯಾದ ಅರಸನೊಬ್ಬನಿದ್ದ. ಅವನು ರಾವಣನನ್ನು ಬಂಧಿಸಿ ಮೂರು ಲೋಕಗಳನ್ನು ಸುತ್ತಿಸಿಬಿಟ್ಟಿದ್ದ. ಬ್ರಹ್ಮನಿಂದ ವರ ಪಡೆದಿದ್ದ ಅವನಿಗೆ ಎದುರಾಳಿಗಳೇ ಇರಲಿಲ್ಲ. ಅಪ್ಪಿತಪ್ಪಿ ಯಾರಾದರೂ ಅವನ ಮುಂದೆ ಬಂದು ನಿಂತರೆ, ಅವರಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗುತ್ತಿತ್ತು ಎನ್ನುವ ಸಾಹಸ ಕಥೆಗಳಿವೆ. ಆ ಅರಸನ ಹೆಸರು ವಾಲಿ (Vali) - ಕಿಷ್ಕಿಂಧಾ ಪುರಿಯ ಅರಸ ವಾಲಿ.
ವಾಲಿ ಎಂದ ಕೂಡಲೇ ಒಂದಷ್ಟು ಜನ ಅವನ ಬಗ್ಗೆ ತಪ್ಪು ಕಲ್ಪನೆಗಳನ್ನು ಮಾಡಿಕೊಳ್ಳುತ್ತಾರೆ. ಅವನು ಮಾಡಿದ್ದ ಒಂದಷ್ಟು ಕೆಲಸಗಳು ಅವನನ್ನು ರಾಕ್ಷಸರಿಗೂ ಹೋಲಿಸುವಂತೆ ಮಾಡಿತ್ತು ಎನ್ನುವುದನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಅದನ್ನು ಮೀರಿದ ವಾಲಿಯ ಪರಾಕ್ರಮವನ್ನು ನಾವು ಒಪ್ಪಿಕೊಳ್ಳಲೇಬೇಕು.
ಕಿಷ್ಕಿಂಧಾ (Kishkindha) ಇದು ನಮ್ಮ ನೆಲ. ಕರ್ನಾಟಕ (Karnataka)ದಲ್ಲಿರುವ ಈ ಪ್ರದೇಶಕ್ಕೆ ಪುರಾಣ ಹಾಗೂ ಇತಿಹಾಸದಲ್ಲೂ ಜಾಗ ಸಿಕ್ಕಿರುವುದು ನಿಜಕ್ಕೂ ನಮ್ಮ ಹೆಮ್ಮೆ. ಹೀಗಾಗಿಯೇ ವಾಲಿ, ಸುಗ್ರೀವ ಮತ್ತು ಹನುಮರ ಬಗ್ಗೆ ನಮ್ಮಲ್ಲಿ ವಿಶೇಷವಾದ ಗೌರವ ಇರಬೇಕು. ಇಂತಹ ಕಿಷ್ಕಿಂಧಾ ನಗರದ ಅರಸನೇ ಈ ವಾಲಿ.
ವಾಲಿ ಮತ್ತು ಸುಗ್ರೀವ ಅಣ್ಣ-ತಮ್ಮಂದಿರು. ಇವರಿಬ್ಬರ ಹುಟ್ಟೇ ವಿಭಿನ್ನ. ಒಂದು ಬಾರಿ ವೃಕ್ಷರಾಜ ನದಿಯಲ್ಲಿ ಮಿಂದು ದಡಕ್ಕೆ ಬರುತ್ತಿದ್ದನಂತೆ. ಅವನಿಗೆ ಅದೇನೆನಿಸಿತ್ತೋ, ತಾನೂ ಸುಂದರವಾದ ಹೆಣ್ಣಂತಾಗಬಾರದೇಕೆ ಅಂದುಕೊಂಡನಂತೆ. ಅಷ್ಟೇ, ಅವನ ರೂಪ ಬದಲಾಗಿಬಿಟ್ಟಿತ್ತಂತೆ. ವೃಕ್ಷರಾಜ ಸುಂದರ ಮೋಹಿನಿಯ ರೂಪ ಪಡೆದುಬಿಟ್ಟನಂತೆ. ಅದೇ ಸಮಯಕ್ಕೆ ಆ ನದಿ ತೀರಕ್ಕೆ ಇಂದ್ರ ಮತ್ತು ಸೂರ್ಯ ಇಬ್ಬರ ಆಗಮನ ಆಗಿತ್ತಂತೆ. ಇಂದ್ರನಿಗೋ ಮೊದಲೇ ಹೆಣ್ಣನ್ನು ಕಂಡರೆ ಅತಿ ವ್ಯಾಮೋಹ. ಅದರಲ್ಲೂ ಸುಂದರ ಹೆಣ್ಣು ಕಾಡಿನಲ್ಲಿದ್ದಾಗ ಅವನು ಸುಮ್ಮನಿರುತ್ತಾನಾ? ಸುಂದರಿಯ ರೂಪದಲ್ಲಿದ್ದ ವೃಕ್ಷರಾಜನನ್ನು ಇಂದ್ರ ಆ ಕೂಡಲೇ ಸೇರಿಬಿಟ್ಟಿದ್ದನಂತೆ. ಅವರಿಬ್ಬರ ಮಿಲನದಿಂದ ಹುಟ್ಟಿದವನೇ ವಾಲಿ.
ಇಂದ್ರನ ನಂತರ ಆ ಸುಂದರಿಯ ಸಂಗ ಬಯಸಿದವನು ಸೂರ್ಯ. ಅವರಿಬ್ಬರ ನಡುವಿನ ಪ್ರೀತಿಯ ಗುರುತಾಗಿ ಜನಿಸಿದವನು ಸುಗ್ರೀವ. ಅವರಿಬ್ಬರೂ ವೃಕ್ಷರಾಜನ ಮಕ್ಕಳಾಗಿ ಜನಿಸಿದ್ದರು. ಇದು ಕಾರಣ ಜನ್ಮ ಎಂತಲೇ ಹೇಳಲಾಗುತ್ತದೆ. ಮುಂದೆ ಭೂಲೋಕದಲ್ಲಿ ಮಹಾವಿಷ್ಣುವಿನ ಅವತಾರಕ್ಕೆ ಸಹಾಯಕನಾಗುವ ಸಮರ್ಥರು ಬೇಕಿದ್ದರಿಂದಲೇ ಇವರಿಬ್ಬರ ಜನನ ಆಗಿತ್ತು ಎಂದು ಹೇಳಲಾಗುತ್ತದೆ. ಹೀಗೆ ಜನ್ಮ ತಳೆದ ವಾಲಿಗೆ ಅವನ ತಂದೆ ಇಂದ್ರನಿಂದ ವರ ದೊರೆತು, ಅವನು 70 ಸಹಸ್ರ ಗಜಗಳ ಬಲವನ್ನು ಪಡೆದುಬಿಟ್ಟನಂತೆ. ಹಾಗೆಯೇ ವಾಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅವನಿಂದಲೂ ವರ ಪಡೆಯುತ್ತಾನೆ - ತನ್ನ ಎದುರಿಗೆ ಯಾರೇ ಬಂದು ನಿಂತು ಯುದ್ಧ ಮಾಡಿದರೂ ಅವರ ಅರ್ಧ ಶಕ್ತಿ ಈ ವಾಲಿಯ ಪಾಲಾಗಿಬಿಡಬೇಕು ಎನ್ನುವ ವರ ಅದು. ಆ ವರ ಪಡೆದ ಮೇಲಂತೂ ವಾಲಿ ಅತಿ ಬಲಶಾಲಿಯಾಗಿಬಿಡುತ್ತಾನೆ.
ಈ ವಾಲಿಯ ಉಲ್ಲೇಖ ಸಮುದ್ರ ಮಂಥನ (Samudra Manthan)ದ ಸಮಯದಲ್ಲೂ ಕೇಳಿ ಬರುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ವಾಲಿ ತನ್ನ ಅಪ್ಪ ದೇವೇಂದ್ರನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಂಥನದಲ್ಲಿ ಭಾಗಿಯಾಗಿದ್ದನಂತೆ. ಅವತ್ತು ಸಮುದ್ರ ಮಂಥನದ ಸಮಯದಲ್ಲಿ ಜನಿಸಿದ ಸುಂದರ ತರುಣಿ ತಾರಾ
ಇಂತಹ ವಾಲಿ ತ್ರೇತಾಯುಗದಲ್ಲಿ ಬಲಿಷ್ಠನಾಗಿದ್ದ. ಅವನು ರಾಮ-ರಾವಣರಿಗಿಂತಲೂ ಬಲಶಾಲಿಯಾಗಿದ್ದ. ಹನುಮನಿಗೂ ಸಹ ವಾಲಿಯ ಎದುರು ನಿಲ್ಲುವ ಸಾಮರ್ಥ್ಯ ಇರಲಿಲ್ಲ. ಇಂತಹ ವಾಲಿಗೆ ಒಮ್ಮೆ ರಾಕ್ಷಸನೊಬ್ಬ ಎದುರಾಗುತ್ತಾನೆ. ಅವನನ್ನು ಸಂಹರಿಸುವುದಕ್ಕೆ ವಾಲಿ ಮತ್ತು ಸುಗ್ರೀವ ಇಬ್ಬರೂ ಬರುತ್ತಾರೆ. ಆ ಯುದ್ಧ ಸಮಯದಲ್ಲಿ ವಾಲಿ ಆ ರಾಕ್ಷಸನನ್ನು ಬಡಿದು ಗುಹೆಯೊಂದರಲ್ಲಿ ಸಿಕ್ಕಿಸಿಕೊಳ್ಳುತ್ತಾನೆ. ಅವರಿಬ್ಬರ ನಡುವೆ ತಿಂಗಳುಗಟ್ಟಲೆ ಯುದ್ಧ ಆಗುತ್ತಿರುತ್ತದೆ. ಆ ಯುದ್ಧದ ಸಮಯದಲ್ಲಿ ಸುಗ್ರೀವ ಆ ಗುಹೆಯ ಬಾಗಿಲಲ್ಲಿ ಕಾಯಬೇಕು, ತಾನು ಬರುವವರೆಗೂ ನೀನು ಇಲ್ಲೇ ಇರಬೇಕು ಎಂದು ವಾಲಿ ಸುಗ್ರೀವನಿಗೆ ಹೇಳಿರುತ್ತಾನೆ. ಆದರೆ ಮಾಸಗಳು ಕಳೆದರೂ ವಾಲಿ ಗುಹೆಯಿಂದ ಹೊರಗೆ ಬರುವುದೇ ಇಲ್ಲ. ಕಡೆಗೊಮ್ಮೆ ವಾಲಿಯ ಧ್ವನಿಯಲ್ಲಿ ಆ ರಕ್ಕಸ ಕೂಗಿಬಿಡುತ್ತಾನೆ. ಸುಗ್ರೀವ, ಆ ರಕ್ಕಸ ವಾಲಿಯನ್ನು ಕೊಂದೇಬಿಟ್ಟಿದ್ದಾನಾ ಎಂದು ಅನುಮಾನಗೊಳ್ಳುತ್ತಾನೆ. ವಾಲಿಯನ್ನೇ ಕೊಂದವನಿಗೆ ನಾನು ಯಾವ ಲೆಕ್ಕ ಎನ್ನುವುದು ಸುಗ್ರೀವರಾಜನಿಗೆ ಅರಿವಾಗುತ್ತದೆ. ಹೀಗಾಗಿಯೇ ಅವನು ದೊಡ್ಡ ದೊಡ್ಡ ಬಂಡೆಗಳಿಂದ ಆ ಗುಹೆಯನ್ನು ಮುಚ್ಚಿ ತನ್ನ ರಾಜಧಾನಿಗೆ ಬಂದುಬಿಡುತ್ತಾನೆ. ಅಲ್ಲಿ ಅರಾಜಕತೆ ಇದ್ದಿದ್ದರಿಂದ ಸುಗ್ರೀವನನ್ನೇ ಕಿಷ್ಕಿಂಧೆಯ ರಾಜನನ್ನಾಗಿ ಆರಿಸಲಾಗುತ್ತದೆ. ಅವನು ತನ್ನ ಪರಿವಾರದೊಂದಿಗೆ ಖುಷಿಯಲ್ಲಿದ್ದ ಸಮಯಕ್ಕೆ ಅಲ್ಲಿಗೆ ವಾಲಿ ಬಂದುಬಿಡುತ್ತಾನೆ.
ಇಷ್ಟಕ್ಕೂ ಅವತ್ತು ಆಗಿದ್ದೇನೆಂದರೆ, ರಾಕ್ಷಸ ಸುಗ್ರೀವನ ದಾರಿ ತಪ್ಪಿಸುವುದಕ್ಕೆ ವಾಲಿಯ ಹಾಗೇ ಕೂಗಿರುತ್ತಾನೆ. ಆ ನಂತರವೂ ಸಾಕಷ್ಟು ತಿಂಗಳುಗಳ ಕಾಲ ವಾಲಿ ಮತ್ತು ರಕ್ಕಸನ ನಡುವೆ ಆ ಗುಹೆಯಲ್ಲಿ ಯುದ್ಧ ಆಗಿರುತ್ತದೆ. ಕೊನೆಗೂ ವಾಲಿಯ ಮುಂದೆ ರಕ್ಕಸನಿಗೆ ನಿಲ್ಲುವುದಕ್ಕೆ ಆಗುವುದಿಲ್ಲ. ಅವನು ವಾಲಿಯ ಕೈಯಲ್ಲಿ ಹತನಾಗುತ್ತಾನೆ. ವಾಲಿ ತನ್ನ ವಿಜಯದ ಕಾರ್ಯವನ್ನು ತಮ್ಮನಿಗೆ ಹೇಳುವುದಕ್ಕೆ ಓಡೋಡಿ ಬರುತ್ತಾನೆ. ಆದರೆ ಆ ಗುಹೆಯ ಬಾಗಿಲು ಮುಚ್ಚಿರುತ್ತದೆ. ಹಾಗೂ ಹೀಗೂ ವಾಲಿ ಗುಹೆಯ ಬಾಗಿಲಿನಲ್ಲಿದ್ದ ಕಲ್ಲುಗಳನ್ನು ಸರಿಸಿ ಕಿಷ್ಕಿಂಧೆಗೆ ಬರುತ್ತಾನೆ. ಅಲ್ಲಿ ಸುಗ್ರೀವನ ವೈಭೋಗವನ್ನು ನೋಡುತ್ತಾನೆ. ತನ್ನ ತಮ್ಮ ತನ್ನ ಪತ್ನಿಯೊಂದಿಗೆ ಇದ್ದಿದ್ದನ್ನು ಕಂಡ ವಾಲಿಗೆ ಕೆಂಡದಂಥ ಕೋಪ ಬರುತ್ತದೆ. ಅಷ್ಟೇ ಅಲ್ಲದೇ ಸುಗ್ರೀವ ತನಗೆ ಮೋಸ ಮಾಡಿದ ಎಂದುಕೊಂಡ ವಾಲಿ, ಬಂದವನೇ ಸುಗ್ರೀವನನ್ನು ಬಡಿದುಬಿಡುತ್ತಾನೆ. ಅಣ್ಣನ ಪರಾಕ್ರಮದ ಮುಂದೆ ಸುಗ್ರೀವ ಏನೂ ಮಾಡಲಾಗದ ಸ್ಥಿತಿ ತಲುಪುತ್ತಾನೆ. ಹೀಗಾಗಿ ಅವನು ವಾಲಿಯ ಕೈಲಿ ಒದೆ ತಿಂದು, ತನ್ನ ಸರ್ವಸ್ವವನ್ನೂ ಕಳೆದುಕೊಂಡು, ಒಂದಷ್ಟು ವಾನರರ ಜೊತೆ ಕಿಷ್ಕಿಂಧಾ ನಗರದ ಹೊರಗೆ ಬಂದುಬಿಡುತ್ತಾನೆ. ಹೇಗೆ ವಾಲಿಯ ಪತ್ನಿ ಸುಗ್ರೀವನ ಜೊತೆಗೆ ಇರಬೇಕಾದ ಪರಿಸ್ಥಿತಿ ಅವತ್ತು ಬಂದೊದಗಿತ್ತೋ, ಅದೇ ರೀತಿ ವಾಲಿ ಸುಗ್ರೀವನ ಪತ್ನಿಯನ್ನು ತನ್ನೊಡನೆಯೇ ಇಟ್ಟುಕೊಳ್ಳುತ್ತಾನೆ.
ಈ ವಿಚಾರ ನಮಗೆ ಇವತ್ತು ಅಸಹ್ಯ ಅನ್ನಿಸಬಹುದು. ಆದರೆ ಅದು ಆ ಕಾಲಕ್ಕೆ ನಿಯಮಬದ್ಧವಾಗಿದ್ದ ಕಲ್ಪನೆ. ಈಗ ವಾಲಿಯ ವಿಚಾರಕ್ಕೆ ಬರುವುದಾದರೆ, ಈ ವಾಲಿ ಸುಗ್ರೀವನನ್ನು ಹೊರಹಾಕಿದ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇದೇ ವಾಲಿ ಸುಗ್ರೀವನನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಅದಕ್ಕೊಂದು ಸ್ಪಷ್ಟ ಉದಾಹರಣೆ ಕೊಡಬೇಕೆಂದರೆ ವಾಲಿ ಮತ್ತು ರಾವಣರ ಯುದ್ಧದ ಸಂದರ್ಭವನ್ನು ಇಲ್ಲಿ ಉಲ್ಲೇಖಿಸಲೇಬೇಕು.
ಒಮ್ಮೆ ನಾರದ ಮುನಿ ರಾವಣನ ಹತ್ತಿರ ಬಂದಿದ್ದಾಗ ವಾಲಿಯ ಗುಣಗಾನ ಮಾಡಿದ್ದನಂತೆ. ವಾಲಿ ಎನ್ನುವ ಪರಾಕ್ರಮಿಯ ಬಗ್ಗೆ ಕೇಳಿದ ರಾವಣನಿಗೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಹೀಗಾಗಿ ಅವನು ವಾಲಿಯನ್ನು ಹುಡುಕಿಕೊಂಡು ಕಿಷ್ಕಿಂಧಾ ನಗರಕ್ಕೆ ಬಂದಿದ್ದನಂತೆ. ಆದರೆ ಆ ಸಂದರ್ಭದಲ್ಲಿ ವಾಲಿ ತಪಸ್ಸಿಗೆ ಕುಳಿತಿದ್ದ. ಆದರೂ ವಾಲಿಯನ್ನು ರಾವಣ ಯುದ್ಧಕ್ಕೆ ಬರುವಂತೆ ಪ್ರೇರೇಪಿಸಿದ್ದನಂತೆ. ಇದನ್ನು ಕಂಡ ಸುಗ್ರೀವ ರಾವಣನನ್ನು ಸೋಲಿಸುವುದಕ್ಕೆ ಮುಂದಾಗಿದ್ದನಂತೆ. ಆದರೆ ರಾವಣನ ಎದುರು ಸುಗ್ರೀವನಿಗೆ ಸೋಲಾಗಿಬಿಟ್ಟಿತ್ತು. ಅವನು ಏನೂ ಮಾಡಲಾಗದ ಸ್ಥಿತಿಯನ್ನು ತಲುಪಿಬಿಟ್ಟ. ಹೀಗಿದ್ದಾಗಲೇ ರಾವಣ ವಾಲಿಯನ್ನು ಕೆಣಕಿಬಿಟ್ಟ. ಆ ನಂತರ ವಾಲಿ ರಾವಣನ ವಿರುದ್ಧ ಯುದ್ಧ ಮಾಡಿದ್ದ. ಆ ಯುದ್ಧದಲ್ಲಿ ರಾವಣನಿಗೆ ಸೋಲಾಗಿತ್ತು. ವಾಲಿ ಎಷ್ಟು ಪರಾಕ್ರಮಿ ಎಂದರೆ, ತನ್ನ ಬಾಲದಿಂದಲೇ ರಾವಣನನ್ನು ಬಂಧಿಸಿಬಿಟ್ಟಿದ್ದ. ಅವನು ಪ್ರತಿದಿನ ಸಂಧ್ಯಾವಂದನೆಗಾಗಿ ಸಮುದ್ರ ತೀರಕ್ಕೆ ಹೋಗುತ್ತಿದ್ದನಲ್ಲಾ, ಆಗೆಲ್ಲಾ ರಾವಣನನ್ನು ಬಾಲದಲ್ಲಿ ಬಂಧಿಸಿಯೇ ಕರೆದುಕೊಂಡು ಹೋಗುತ್ತಿದ್ದ. ಅದು ವಾಲಿ ರಾವಣನಿಗೆ ಕೊಟ್ಟಿದ್ದ ಶಿಕ್ಷೆ, ದುರಹಂಕಾರಿಗಳಿಗೆ ವಾಲಿಯಿಂದ ಸಿಕ್ಕಿದ್ದ ಬಹುಮಾನ, ತನ್ನ ತಮ್ಮನಿಗಾದ ಅವಮಾನಕ್ಕೆ ವಾಲಿ ಸೇಡು ತೀರಿಸಿಕೊಂಡ ರೀತಿ. ಆ ನಂತರ ರಾವಣ ವಾಲಿಯ ಕ್ಷಮೆ ಕೇಳಿ ಅವನ ಬಳಿ ಸ್ನೇಹ ಬಯಸುತ್ತಾನೆ. ವಾಲಿ-ರಾವಣರು ಸ್ನೇಹಿತರಾಗುತ್ತಾರೆ. ಆ ನಂತರ ಎಂದಿಗೂ ಸಹ ರಾವಣ ಕಿಷ್ಕಿಂಧೆಯ ಕಡೆ ತಲೆ ಹಾಕಿಯೂ ಮಲಗುವುದಿಲ್ಲ.
ಹೀಗೆ ಸುಗ್ರೀವನನ್ನು ಕಾಪಾಡಿಕೊಂಡಿದ್ದ ವಾಲಿ, ಕಡೆಗೊಂದು ದಿನ ಸುಗ್ರೀವನ ಪತ್ನಿಯನ್ನೂ ಸಹ ಕಿತ್ತುಕೊಂಡು ತಮ್ಮನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿಬಿಡುತ್ತಾನೆ. ಈ ಸಮಯದಲ್ಲೇ ಸೀತಾಪಹರಣವಾಗಿ, ರಾಮ ಸೀತೆಯನ್ನು ಹುಡುಕಿಕೊಂಡು ಕಿಷ್ಕಿಂಧೆಯ ಕಡೆ ಬರುತ್ತಾನೆ. ಆಗ ಹನುಮ ರಾಮನಿಗೆ ಸಿಕ್ಕಿ, ಆ ನಂತರದಲ್ಲಿ ರಾಮ-ಸುಗ್ರೀವರು ಭೇಟಿಯಾಗುತ್ತಾರೆ. ರಾಮ ಸುಗ್ರೀವನಿಗೆ ಸಹಾಯ ಮಾಡುವುದಾಗಿ ತಿಳಿಸಿ ವಾಲಿಯನ್ನು ಸಂಹರಿಸುವುದಕ್ಕೆ ಮುಂದಾಗುತ್ತಾನೆ. ವಾಲಿ-ಸುಗ್ರೀವರ ಯುದ್ಧ ಸಮಯದಲ್ಲಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ಕೊಂದುಬಿಡುತ್ತಾನೆ. ವಾಲಿಗಿದ್ದ ಅದ್ಭುತ ಶಕ್ತಿಯ ಬಗ್ಗೆ ರಾಮನಿಗೆ ಗೊತ್ತಿರುತ್ತದೆ. ಹಾಗಾಗಿಯೇ ಅವನು ವಾಲಿಯೊಂದಿಗೆ ನೇರ ಯುದ್ಧ ಮಾಡುವುದಿಲ್ಲ. ಈ ವಿಚಾರದಲ್ಲಿ ಮತ್ತೊಂದು ವಾದವೂ ಇದೆ - ವಾಲಿಯನ್ನು ರಾಮ ರಾಜ ಎಂದು ಭಾವಿಸಿರುವುದಿಲ್ಲ, ಹೀಗಾಗಿ ಅವನು ವಾಲಿಯೊಂದಿಗೆ ನೇರ ಯುದ್ಧ ಮಾಡಿರುವುದಿಲ್ಲ ಎಂತಲೂ ಹೇಳಲಾಗುತ್ತದೆ.
ಹೀಗೆ ವಾಲಿಯನ್ನು ಸಂಹರಿಸಿದ ರಾಮ ವಾಲಿಗೆ ದರ್ಶನ ಕೊಡುತ್ತಾನೆ. ತಾನು ಏಕೆ ನಿನ್ನನ್ನು ಸಂಹರಿಸಿದೆ ಎಂತಲೂ ರಾಮ ಹೇಳುತ್ತಾನೆ. ಹೀಗಾಗಿ ಆ ನಂತರದಲ್ಲಿ ವಾಲಿಗೆ ತನ್ನ ತಪ್ಪಿನ ಅರಿವಾಗಿ, ಅವನು ಸುಗ್ರೀವನನ್ನು ಕರೆದು ರಾಜ್ಯಭಾರ ಮಾಡುವಂತೆ ತಿಳಿಸುತ್ತಾನೆ. ರಾಮನಿಗೆ ನಿಷ್ಠೆಯಿಂದ ಇರುವಂತೆ ಹೇಳುತ್ತಾನೆ. ತನ್ನ ಮಗ ಅಂಗದನನ್ನು ಕರೆದು, ಚಿಕ್ಕಪ್ಪನ ಮಾತು ಕೇಳುವಂತೆಯೂ, ರಾಮನ ಸೇವೆಯನ್ನು ಮರೆಯಬಾರದೆಂತಲೂ ಹೇಳಿ ಪ್ರಾಣ ತ್ಯಾಗ ಮಾಡುತ್ತಾನೆ.
ಹೀಗೆ ತ್ರೇತಾಯುಗದಲ್ಲಿ ಮಹಾಪರಾಕ್ರಮಿಯಾಗಿದ್ದ ವಾಲಿಯ ಅಂತ್ಯವಾಗುತ್ತದೆ. ಹೇಗೆ ರಾಮ ವಾಲಿಯನ್ನು ಮರೆಯಲ್ಲಿ ನಿಂತು ಕೊಂದಿದ್ದನೋ, ಅದೇ ರೀತಿ ವಾಲಿ ದ್ವಾಪರಯುಗದಲ್ಲಿ ಜರಾ ಎನ್ನುವ ಬೇಟೆಗಾರನಾಗಿ ಜನಿಸಿ ಶ್ರೀಕೃಷ್ಣನನ್ನು ತನಗೆ ಅರಿವಿಲ್ಲದಂತೆ ಕೊಂದುಬಿಡುತ್ತಾನೆ. ಅದು ವಾಲಿಗೆ ಮಹಾವಿಷ್ಣು ಕೊಟ್ಟಿದ್ದ ವರ ಎಂತಲೇ ಹೇಳಲಾಗುತ್ತದೆ - ನಿನ್ನ ಸಾವಿಗೆ ನ್ಯಾಯ ಸಿಗಬೇಕಾದರೆ, ನಾನು ಹೇಗೆ ನಿನ್ನನ್ನು ವಧಿಸಿದ್ದೆನೋ ಅದೇ ರೀತಿಯಲ್ಲಿ ನಿನ್ನಿಂದ ಮುಂದಿನ ಜನ್ಮದಲ್ಲಿ ನನ್ನ ಅವತಾರವನ್ನು ಕೊನೆಗಾಣಿಸಿಕೊಳ್ಳುತ್ತೇನೆ ಎಂತಾ ವಿಷ್ಣು ಮಾತು ಕೊಟ್ಟಿದ್ದನಂತೆ. ಅದರಂತೆ ವಾಲಿ ದ್ವಾಪರದಲ್ಲಿ ಜರನಾಗಿ ಕೃಷ್ಣನ ಅಂತ್ಯಕ್ಕೆ ಕಾರಣನಾದ ಎಂತಾ ಹೇಳಲಾಗುತ್ತದೆ.
ರಾಮಾಯಣದ ಅತಿ ಬಲಶಾಲಿ ಪಾತ್ರದ ರೋಚಕ ಕಥೆ: The Story of Vali.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.