Uttarakhand Gurudwara Drama: ನಿಹಾಂಗ್ ಸಿಖ್ಖರ ವಶದಲ್ಲಿ Shrine?
ಉತ್ತರಾಖಂಡದ ಚಮೋಲಿ ಅಕ್ಷರಶಃ ರಣರಂಗವಾಗಿದೆ. ಅಲ್ಲಿನ ಒಂದು ಗುರುದ್ವಾರವನ್ನು ನಿಹಾಂಗ್ ಪಂಥದ ಸಿಖ್ಖರು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಗುರುದ್ವಾರದಲ್ಲಿ ಸಾಕಷ್ಟು ಭಕ್ತರು ಕೂಡ ಇದ್ದು, ಅವರೆಲ್ಲರನ್ನೂ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲಾಗಿದೆ. ಈ ಮೂಲಕ ಇತ್ತೀಚೆಗೆ ಉತ್ತರಾಖಂಡ ಪೊಲೀಸರು ಬಂಧಿಸಿದ್ದ ನಾಲ್ವರು ಸಿಖ್ಖರನ್ನು ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಯನ್ನು ನಿಹಾಂಗರು ಇಟ್ಟಿದ್ದಾರೆ. ಆ ಗುರುದ್ವಾರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಪ್ರಯತ್ನಗಳು ಆರಂಭವಾಗಿವೆ. ಹಾಗಾದರೆ, ಏನಿದು ಸಿಖ್ಖರೇ ಗುರುದ್ವಾರವನ್ನು ಒತ್ತೆ ಇಟ್ಟುಕೊಂಡಿರುವ ಪ್ರಕರಣ? ಚಮೋಲಿಯಲ್ಲಿ ಬಂಧಿತರಾಗಿರುವ ಆ ನಾಲ್ವರು ಸಿಖ್ಖರು ಯಾರು? ಅವರ ಮೇಲಿನ ಆರೋಪ ಏನು? ಎಂಬುದರ ಬಗ್ಗೆ ಒಂದಷ್ಟು ಮಾಹಿತಿ.
ಗುರುದ್ವಾರ ವಶಕ್ಕೆ ಪಡೆದಿದ್ದು ಹೇಗೆ?
ಸರಿಸುಮಾರು 50ರಿಂದ 60 ಮಂದಿ ನಿಹಾಂಗ್ ಸಿಖ್ಖರು ರುದ್ರಪ್ರಯಾಗದ ಗುರುದ್ವಾರಕ್ಕೆ ಬಂದಿದ್ದಾರೆ. ಅಲ್ಲಿಗೆ ಬಂದ ಅವರು ಅಲ್ಲಿ ಉಳಿಯುವುದಕ್ಕೆ ಹಾಗೂ ರುದ್ರಪ್ರಯಾಗದ ಪೊಲೀಸರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಅನುಕೂಲ ಮಾಡಿಕೊಡುವಂತೆ ವ್ಯವಸ್ಥೆಗಳನ್ನು ಮಾಡಿಕೊಡಿ ಎಂದು ಗುರುದ್ವಾರ ಕಮಿಟಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಲ್ಲಿ ನಡೆದಿದ್ದ ಘಟನೆಯ ಬಗ್ಗೆ ಸಂಪೂರ್ಣ ಅರಿವಿದ್ದ ಕಮಿಟಿ, ಅದಕ್ಕೆಲ್ಲ ಅವಕಾಶ ಕೊಡುವುದಕ್ಕೆ ಆಗುವುದಿಲ್ಲ, ನೀವು ಪ್ರಾರ್ಥನೆಯನ್ನು ಮುಗಿಸಿ ಇಲ್ಲಿಂದ ಹೊರಡಿ ಎಂದು ಹೇಳಿದೆ. ಅದಕ್ಕೆ ಈ ನಿಹಾಂಗರು ಒಪ್ಪಿಲ್ಲ. ಅಲ್ಲಿ ಮಾತಿಗೆ ಮಾತು ಬೆಳೆದಿದೆ. ನಿಹಾಂಗರ ತಂಡ ಆ ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕುಳಿತಿದೆ. ನಿಹಾಂಗ್ ಎಂಬುದು ಸಿಖ್ ಪಂಥದ ವಾರಿಯರ್ ಗ್ರೂಪ್ (Sikh warrior group). ಅವರು ಪ್ರತಿಭಟನೆ ಮಾಡುತ್ತೇವೆ, ವ್ಯವಸ್ಥೆ ಮಾಡಿಕೊಡಿ ಎಂದಾಗ ಗುರುದ್ವಾರ ಕಮಿಟಿ ಅದಕ್ಕೆ ನಿರಾಕರಿಸಿದ್ದು ಏಕೆ ಎಂಬುದು ಅರ್ಥವಾಗಬೇಕಾದರೆ, ರುದ್ರಪ್ರಯಾಗದಲ್ಲಿ ಏನಾಯಿತು ಎಂಬುದನ್ನೂ ನಾವು ತಿಳಿದುಕೊಳ್ಳಬೇಕು.
ಪಾರ್ಕಿಂಗ್ ಜಗಳ ತಲ್ವಾರ್ ದಾಳಿಗೆ ತಿರುಗಿದ್ದು ಹೇಗೆ?
ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ನಿಹಾಂಗರ ನಡುವೆ ಒಂದು ಸಣ್ಣ ವಿವಾದ ಶುರುವಾಗುತ್ತದೆ. ಮಾತಿಗೆ ಮಾತು ಬೆಳೆದು, ನಿಹಾಂಗರು ತಮ್ಮ ತಲ್ವಾರ್‌ಗಳನ್ನು ಹೊರಗೆಳೆದು ಸಾರ್ವಜನಿಕರ ಮೇಲೆ ದಾಳಿಗೆ ನಿಂತುಬಿಡುತ್ತಾರೆ. ಇದು ಅಲ್ಲಿ ನಡೆದ ಗಲಾಟೆ. ಬರೀ ಪಾರ್ಕಿಂಗ್‌ನಂತಹ ಸಣ್ಣ ವಿಷಯಕ್ಕೆ ತಲ್ವಾರ್‌ಗಳನ್ನು ಬೀಸುತ್ತಾರೆಂದರೆ, ಅವರಿಗೆ ಒಂದು ಆಯುಧದ ಮದ ಇರಬೇಕು ಅಥವಾ ಮಾದಕ ಪದಾರ್ಥಗಳ ಕಿಕ್ ಏರಿರಬೇಕು ಎನಿಸುತ್ತದೆ. ಗಲಾಟೆಯ ವಿಷಯ ಗೊತ್ತಾಗಿ ಅಲ್ಲಿಗೆ ಪೊಲೀಸರು ಬರುತ್ತಾರೆ, ತಲ್ವಾರ್ ಬೀಸಿದವರನ್ನು ಬಂಧಿಸುತ್ತಾರೆ ಕೂಡ. ಇದು ಇಡೀ ನಿಹಾಂಗ್ ಪಂಗಡಕ್ಕೆ ಆದ ಅಪಮಾನ; ನಮ್ಮನ್ನು ಪೊಲೀಸರು ಬಂಧಿಸುವುದೇನು? ನಾವು ಸಿಖ್ ಧರ್ಮದ ಸಂರಕ್ಷಕರು, ನಮ್ಮನ್ನು ಯಾರೂ ಮುಟ್ಟುವಂತಿಲ್ಲ ಎಂದು ನಿಹಾಂಗರು ಪ್ರತಿಭಟನೆಗೆ ಮುಂದಾಗುತ್ತಾರೆ. ಅದರ ಜೊತೆಗೆ ಈಗ ಗುರುದ್ವಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಬಂಧಿತ ನಿಹಾಂಗರನ್ನು ಬಿಡುಗಡೆ ಮಾಡಬೇಕು ಎಂದು ಧಮಕಿ ಹಾಕುತ್ತಾ ಕುಳಿತಿದ್ದಾರೆ.
"ನಾವು ಸಿಖ್ ಧರ್ಮದ ಸಂರಕ್ಷಕರು, ನಮ್ಮನ್ನು ಯಾರೂ ಮುಟ್ಟುವಂತಿಲ್ಲ" — ನಿಹಾಂಗರ ಪ್ರತಿಪಾದನೆ
ನಿಹಾಂಗ್ ಸಿಖ್ಖರು ಯಾರು?
ಇನ್ನು ಈ ನಿಹಾಂಗರು ಯಾರು? ಸಾಮಾನ್ಯವಾಗಿ ಆಯುಧಗಳನ್ನು ಹೀಗೆ ಕೈಯಲ್ಲಿಟ್ಟುಕೊಂಡು ಓಡಾಡುವುದು ಅಪರಾಧ ಅಲ್ಲವೇ? ಇವರೇಕೆ ತಲ್ವಾರ್ ಇಟ್ಟುಕೊಂಡೇ ಇರುತ್ತಾರೆ? ಅದಕ್ಕೆ ಅನುಮತಿ ಇದೆಯೇ? ಇವರ ಉಡುಗೆ ಏಕೆ ಹೀಗಿದೆ? ಸಿಖ್ ಸಮುದಾಯದಲ್ಲಿ ನಿಹಾಂಗರಿಗೆ ಮಹತ್ವದ ಸ್ಥಾನವಿದೆ. ಇವರನ್ನು ಧರ್ಮ ಯೋಧರು ಎಂದು ಗುರುತಿಸಲಾಗುತ್ತದೆ. ತಮ್ಮ ವಿಶಿಷ್ಟ ನೀಲಿ ವಸ್ತ್ರ, ಕತ್ತಿ, ತಲ್ವಾರ್ ಹಾಗೂ ಇನ್ನಿತರ ಶಸ್ತ್ರಗಳ ಬಳಕೆ ಹಾಗೂ ಕಠಿಣ ಶಿಸ್ತನ್ನು ಪಾಲಿಸುವುದರ ಮೂಲಕ ಇವರು ಪ್ರಸಿದ್ಧಿ ಪಡೆದಿದ್ದಾರೆ. ನಿಹಾಂಗ್ ಸಿಖ್ಖರನ್ನು ಅಕಾಲ್ ಸೇನಾ, ಅಂದರೆ ದೇವರ ಸೇನೆ ಎಂದೂ ಕರೆಯಲಾಗುತ್ತದೆ. ಸಿಖ್ ಧರ್ಮ, ಧಾರ್ಮಿಕ ಸ್ವಾತಂತ್ರ್ಯ ಮತ್ತು ನಿರಪರಾಧಿಗಳ ರಕ್ಷಣೆಗೆ ತಮ್ಮ ಜೀವನವನ್ನೇ ಸಮರ್ಪಿಸಿದ ಯೋಧರಾಗಿ ಇವರು ಇತಿಹಾಸದಲ್ಲಿ ಅಮರರಾಗಿದ್ದಾರೆ. ಶಸ್ತ್ರ ಮತ್ತು ಶಾಸ್ತ್ರ ಎರಡನ್ನೂ ತಿಳಿದಿದ್ದ, ಶಸ್ತ್ರಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದ ನಾಗಾ ಸಾಧು ಪಂಥವನ್ನು ಸ್ಥಾಪಿಸಿದಂತೆಯೇ, ವಿದೇಶಿ ಆಕ್ರಮಣಗಳ ವಿರುದ್ಧ ಸಿಖ್ ಧರ್ಮದ ರಕ್ಷಣೆಗಾಗಿ ಹುಟ್ಟಿಕೊಂಡ ಸಶಸ್ತ್ರ ಸನ್ಯಾಸಿಗಳ ಪಡೆ ಈ ನಿಹಾಂಗರದ್ದು.
ಇತಿಹಾಸದುದ್ದಕ್ಕೂ ನಿಹಾಂಗರ ಪಾತ್ರ
ಗುರು ಗೋವಿಂದ ಸಿಂಗ್ ಅವರು ಈ ಪಂಥವನ್ನು ಆರಂಭಿಸಿದ್ದೇ ಮೊಘಲರ ವಿರುದ್ಧದ ಹೋರಾಟಕ್ಕಾಗಿ. ಆ ಸಂದರ್ಭದಲ್ಲಿ ಮೊಘಲರ ದೌರ್ಜನ್ಯವನ್ನು ಎದುರಿಸುವ ನಿಟ್ಟಿನಲ್ಲಿ ನಿಹಾಂಗ್ ಯೋಧರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಹಾಗೆಯೇ ಅಫ್ಘನ್ ದೊರೆ ಅಹ್ಮದ್ ಷಾ ದುರ್ರಾನಿ (Ahmad Shah Durrani) ವಿರುದ್ಧ ಕೂಡ ನಿಹಾಂಗ್ ಯೋಧರು ಹೋರಾಡಿ ಪಂಜಾಬ್ ಪ್ರದೇಶವನ್ನು ರಕ್ಷಿಸಿದ್ದರು. ಇನ್ನು ಮಹಾರಾಜ ರಣಜಿತ್ ಸಿಂಗ್ (Maharaja Ranjit Singh) ಅವರ ಆಡಳಿತದಲ್ಲಿ ನಿಹಾಂಗ್ ಸಿಖ್ಖರು ಸೇನೆಯಲ್ಲಿ ಪ್ರಮುಖರಾಗಿ ಗುರುತಿಸಿಕೊಂಡರು. ಹಾಗೆಯೇ ಬ್ರಿಟಿಷರ ಕಾಲದಲ್ಲಿಯೂ ನಿಹಾಂಗ್ ಸಿಖ್ಖರು ಸಿಖ್ ಸಂಪ್ರದಾಯಗಳು ಮತ್ತು ಧಾರ್ಮಿಕ ಕೇಂದ್ರಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ದೆಹಲಿಯಲ್ಲಿ ನಡೆದ ರೈತ ಪ್ರತಿಭಟನೆಗಳಲ್ಲಿಯೂ ನಿಹಾಂಗ್ ಸಿಖ್ಖರು ಭಾಗಿಯಾಗಿದ್ದರು. ಅವತ್ತು ಇವರು ದೆಹಲಿಯ ಕೆಂಪು ಕೋಟೆಯಲ್ಲಿ ನಿಂತು ಕತ್ತಿ ಬೀಸಿದ್ದು ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಅದೇ ನಿಹಾಂಗರೇ ಈಗ ಉತ್ತರಾಖಂಡದಲ್ಲಿ ಸಮಸ್ಯೆಗೆ ಕಾರಣರಾಗುತ್ತಿದ್ದಾರೆ.
ಮುಂದೇನು? ಪೊಲೀಸ್ ಕಾರ್ಯತಂತ್ರ ಮತ್ತು ಸವಾಲುಗಳು
ಅಲ್ಲಿ ಆಗಿರುವುದು ಪಾರ್ಕಿಂಗ್ ವಿಚಾರದ ಜಗಳ. ಕೆಲವೊಮ್ಮೆ ಪ್ರವಾಸಿ ತಾಣಗಳಲ್ಲಿ ಇಂತಹ ಜಗಳಗಳು ಆಗುತ್ತಿರುತ್ತವೆ. ಕೆಲವು ಕಡೆಗಳಲ್ಲಿ ಸ್ಥಳೀಯರೇ ಕಿರಿಕಿರಿ ತೆಗೆದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಪ್ರವಾಸಕ್ಕೆ ಹೋದವರೇ ಸ್ಥಳೀಯರ ವಿರುದ್ಧ ಜಗಳಕ್ಕೆ ನಿಲ್ಲುತ್ತಾರೆ. ಇದು ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತದೆ. ಜೂನ್ 16ರಂದು ಈ ನಿಹಾಂಗರು ಶ್ರೀ ಹೇಮ್‌ಕುಂಡ್ ಸಾಹಿಬ್ ಗುರುದ್ವಾರದಿಂದ (Sri Hemkund Sahib Gurdwara) ಬರುತ್ತಿದ್ದ ಸಂದರ್ಭದಲ್ಲಿ ಕರ್ಣಪ್ರಯಾಗದಲ್ಲಿ ವಾಹನ ನಿಲುಗಡೆ ವಿಷಯವಾಗಿ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋಗಿ, ಈಗ ಎರಡು ಮತಗಳ ನಡುವಿನ ಸಂಘರ್ಷದಂತೆ ಭಾಸವಾಗುತ್ತಿದೆ. ಆದರೆ ಅಲ್ಲಿ ಯಾವುದೇ ರೀತಿಯ ಕೋಮು ಗಲಭೆ ಆಗಿಲ್ಲ ಎಂಬುದನ್ನು ಗಮನಿಸಬೇಕು. ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಲಾಗುತ್ತಿದ್ದು, ನಿಹಾಂಗರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ಸದ್ಯ ರುದ್ರಪ್ರಯಾಗದ ಗುರುದ್ವಾರದಲ್ಲಿ ಒತ್ತೆಯಾಳುಗಳಾಗಿ ಸಿಕ್ಕಿಹಾಕಿಕೊಂಡಿರುವವರನ್ನು ಬಿಡಿಸುವ ಕೆಲಸವೂ ನಡೆಯುತ್ತಿದೆ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.