ಏಳು ಜನ ಚಿರಂಜೀವಿಗಳು (Chiranjeevi) ಇನ್ನೂ ಇದ್ದಾರೆ ಎನ್ನುವುದು ಸನಾತನ ಧರ್ಮ (Sanatana Dharma)ದ ನಂಬಿಕೆ. ಆ ಏಳು ಮಂದಿಯಲ್ಲಿ ವಿಶೇಷವಾಗಿ ಕಾಣಿಸುವುದು ಆ ರಕ್ಕಸ ಅರಸ. ರಾಕ್ಷಸ ಕುಲದಲ್ಲಿ ಜನಿಸಿದ್ದರೂ ಒಬ್ಬ ಮಹಾಬ್ರಾಹ್ಮಣನಂತೆ ಜೀವಿಸಿದ್ದ ಅವನು, ಬ್ರಹ್ಮನ ವರದಿಂದ ಚಿರಂಜೀವಿಯಾಗಿದ್ದಾನೆ. ಹಾಗಿದ್ದರೆ ಯಾರು ಆ ರಕ್ಕಸ ಅರಸ? ಅವನು ಚಿರಂಜೀವಿ ಆಗಿದ್ದು ಹೇಗೆ?
"ಅಶ್ವತ್ಥಾಮಾ ಬಲಿರ್ ವ್ಯಾಸೋ ಹನುಮಾಂಶ್ಚ ವಿಭೀಷಣಃ, ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ" - ಈ ಶ್ಲೋಕ ಸನಾತನ ಧರ್ಮದ ಏಳು ಜನ ಚಿರಂಜೀವಿಗಳ ಬಗ್ಗೆ ತಿಳಿಸುತ್ತದೆ. ಈ ಏಳು ಚಿರಂಜೀವಿಗಳಲ್ಲಿ ವಿಷ್ಣುವಿನ ಅವತಾರವಾದ ಪರಶುರಾಮರು, ಶಿವಾಂಶ ಸಂಭೂತನಾದ ರಾಮಭಕ್ತ ಹನುಮ, ವ್ಯಾಸರಂತಹ ಜ್ಞಾನಿಗಳು, ಕೃಪಾಚಾರ್ಯ ಹಾಗೂ ಅಶ್ವತ್ಥಾಮರಂತಹ ಸಕಲ ವಿದ್ಯಾಪಾರಂಗತರ ಜೊತೆ, ಬಲಿ ಹಾಗೂ ವಿಭೀಷಣ ಎಂಬ ಇಬ್ಬರು ರಕ್ಕಸರೂ ಇದ್ದಾರೆ. ಆದರೆ ಅವರ ನಡೆ-ನುಡಿ, ವಿಷ್ಣುವಿನ ಮೇಲಿನ ಭಕ್ತಿಯಿಂದ ಅವರು ಚಿರಂಜೀವಿಗಳಾಗಿದ್ದಾರೆ. ಆ ಪೈಕಿ ಒಬ್ಬನಾದ ಶ್ರೀರಾಮ ಭಕ್ತನಾದ ವಿಭೀಷಣನ ಬಗ್ಗೆ ಒಂದಷ್ಟು ಮಾಹಿತಿ.
ವಿಭೀಷಣ - ಲಂಕಾಧೀಶ್ವರ ರಾವಣನ ತಮ್ಮ. ಆದರೂ ಅವನಲ್ಲಿ ರಕ್ಕಸ ಗುಣಗಳು ಹೆಚ್ಚಿರದೇ ನ್ಯಾಯ-ಧರ್ಮ ಎನ್ನುವುದನ್ನು ಪಾಲಿಸಿದ್ದವನು ವಿಭೀಷಣ. ಈ ವಿಭೀಷಣ, ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬರಾದ ಪುಲಸ್ತ್ಯ ಮುನಿಗಳ ಪುತ್ರರಾದ ವಿಶ್ವಶ್ರವಸ್ಸು ಮಹಾಮುನಿ ಹಾಗೂ ರಾಕ್ಷಸ ಕನ್ಯೆ ಕೈಕಸಿಯ ಪುತ್ರ. ವಿಭೀಷಣನಿಗೆ ರಾವಣ ಮತ್ತು ಕುಂಭಕರ್ಣ ಅಣ್ಣಂದಿರಾದರೆ, ಶೂರ್ಪನಖಿ ಅಕ್ಕನಾಗಿದ್ದಳು. ರಾಕ್ಷಸ ಕನ್ಯೆಯ ಪುತ್ರನಾಗಿದ್ದರೂ, ವಿಭೀಷಣನಲ್ಲಿ ರಾಕ್ಷಸತ್ವ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಅವನು ತನ್ನ ಅಣ್ಣ ಲಂಕಾಧೀಶ ರಾವಣನ ಆಸ್ಥಾನದಲ್ಲಿ ಮಂತ್ರಿಯಾಗಿದ್ದು, ರಾವಣ ನಡೆಸುತ್ತಿದ್ದ ಧರ್ಮ ವಿರೋಧಿ ಕಾರ್ಯಗಳನ್ನು ಗುರುತಿಸುತ್ತಿದ್ದ ಹಾಗೂ ಅವುಗಳನ್ನು ಮಾಡದಂತೆ ರಾವಣನನ್ನು ಎಚ್ಚರಿಸುತ್ತಿದ್ದ.
ಇಂತಹ ವಿಭೀಷಣ ರಾವಣನ ವಿರುದ್ಧ ತಿರುಗಿ ಬಿದ್ದಿದ್ದು ಸೀತಾಪಹರಣ (Sita Haran)ದ ಸಮಯದಲ್ಲಿ. ಅವತ್ತು ತನ್ನ ತಂಗಿ ಶೂರ್ಪನಖಿಯ ಮಾತುಗಳನ್ನು ಕೇಳಿದ್ದ ರಾವಣ, ಹಿಂದೂ-ಮುಂದು ನೋಡದೇ ತನ್ನ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಸೀತಾಪಹರಣವನ್ನು ಮಾಡಿದ್ದ. ಅಣ್ಣನ ಈ ಕೃತ್ಯ ವಿಭೀಷಣನಿಗೆ ಸಹಿಸಲಾಗಲಿಲ್ಲ. ಹೀಗಾಗಿ ಅವನು ರಾವಣನಿಗೆ ಬುದ್ಧಿ ಹೇಳಿದ್ದ - ಪ್ರಜಾ ಹಿತದ ದೃಷ್ಟಿಯಿಂದ, ಲಂಕೆಯ ಕ್ಷೇಮದ ದೃಷ್ಟಿಯಿಂದ ಸೀತಾದೇವಿಯನ್ನು ರಾಮನಿಗೆ ಒಪ್ಪಿಸು, ಪರಸ್ತ್ರೀಯರನ್ನು ಕೆಣಕಿ ಅದರಿಂದ ಆಗುವ ಅನಾಹುತವನ್ನು ತಪ್ಪಿಸು, ಮುಂದೆ ನಡೆಯಲಿರುವ ಘೋರ ಯುದ್ಧವನ್ನು ನಿಲ್ಲಿಸು ಎಂದು ಅಣ್ಣನಲ್ಲಿ ಹೇಳಿದ್ದ. ಆದರೆ ರಾವಣ ವಿಭೀಷಣನ ಮಾತಿಗೆ ಬೆಲೆ ಕೊಡಲಿಲ್ಲ. ರಾವಣ ವಿಭೀಷಣನನ್ನೇ ಜರಿದಿದ್ದ - "ನೀನು ರಾಮನ ಪಕ್ಷಪಾತಿ, ನೀನೊಬ್ಬ ಪುಕ್ಕಲ, ಲಂಕೆಯ ಮಣ್ಣಲ್ಲಿ ನಿಂತು ಹೀಗೆ ಮಾತನಾಡುವುದೇ? ನಮ್ಮ ಮನೆಯ ಹೆಣ್ಣು ಮಗಳಿಗೆ ಆದ ನೋವಿಗೆ ನಾನು ಪ್ರತೀಕಾರ ತೀರಿಸಿಯೇ ತೀರುತ್ತೇನೆ" ಎಂದು ರಾವಣ ಅಬ್ಬರಿಸಿದ್ದ. ಹೀಗಾಗಿ ಅಲ್ಲಿ ಯುದ್ಧವನ್ನು ತಡೆಯುವ ವಿಭೀಷಣನ ಕಾರ್ಯ ಫಲ ಕೊಡಲಿಲ್ಲ. ಹಾಗೆಯೇ ರಾವಣನ ಮಾತುಗಳಿಂದ ಬೇಸರಗೊಂಡ ವಿಭೀಷಣ, ತನ್ನ ಅಣ್ಣನನ್ನು ತ್ಯಜಿಸಿ ರಾಮನ ಜೊತೆ ಸೇರಿದ್ದ.
ಹೀಗೆ ವಿಭೀಷಣ ರಾಮನ ಪಕ್ಷ ಸೇರಿದ ನಂತರ ರಾಮ-ರಾವಣ (Ramayana War)ರ ನಡುವೆ ಯುದ್ಧ ನಡೆದು, ಆ ಯುದ್ಧದಲ್ಲಿ ರಾವಣ ಸಾವನ್ನಪ್ಪುತ್ತಾನೆ. ಎರಡು ಕಡೆಯ ಸಾಕಷ್ಟು ಯೋಧರು ಸಾಯುತ್ತಾರೆ. ಒಂದು ಸೇಡಿನ ಕಿಡಿ ಇಡೀ ಲಂಕೆಯನ್ನೇ ಸುಟ್ಟುಬಿಡುತ್ತದೆ. ಹೀಗೆ ಲಂಕೆ ರಾಮನ ಎದುರು ಸೋತ ನಂತರ ಶ್ರೀರಾಮ ಸೀತಾದೇವಿಯನ್ನು ಕರೆದುಕೊಂಡು ಅಯೋಧ್ಯೆಯ ಕಡೆಗೆ ಹೊರಡುತ್ತಾನೆ. ಅದಕ್ಕೂ ಮುನ್ನ ಲಂಕೆಗೆ ವಿಭೀಷಣನನ್ನು ಅರಸನನ್ನಾಗಿಸಿ ಪಟ್ಟ ಕಟ್ಟುತ್ತಾನೆ. ಆ ನಂತರದಲ್ಲಿ ವಿಭೀಷಣ ಧರ್ಮ ಹಾದಿಯಲ್ಲಿ ತನ್ನ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಾನೆ.
ಇಂತಹ ವಿಭೀಷಣ ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿದ್ದು ಹೇಗೆ ಎನ್ನುವುದು ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟಕ್ಕೂ ವಿಭೀಷಣನಿಗಿದ್ದ ಚಿರಂಜೀವಿಯಾಗುವ ವರದ ಹಿಂದೆ ಸಣ್ಣ ಕತೆ ಇದೆ. ಈ ವಿಭೀಷಣ ಚಿಕ್ಕಂದಿನಿಂದಲೂ ತಾಯಿಯ ಆರೈಕೆಯಲ್ಲೇ ಬೆಳೆದಿದ್ದ. ಅಷ್ಟಾದರೂ ಅವನಲ್ಲಿ ತಾಯಿಯ ಗುಣಗಳು ಕಡಿಮೆ ಇದ್ದವು. ರಾವಣ-ಕುಂಭಕರ್ಣರು ರಾಕ್ಷಸ ಗುಣಗಳನ್ನು ಮೈಗೂಡಿಸಿಕೊಂಡರೆ, ವಿಭೀಷಣ ತನ್ನ ತಂದೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದ. ಹೀಗಾಗಿ ಅವನಲ್ಲಿ ಬ್ರಾಹ್ಮಣತ್ವ ಹೆಚ್ಚಾಗಿತ್ತು. ಅವನು ಮಹಾಬ್ರಾಹ್ಮಣ ಎಂತಲೇ ಗುರುತಿಸಿಕೊಂಡಿದ್ದ. ಆದರೆ ವಿಭೀಷಣನ ಈ ನಡೆ ತಾಯಿ ಕೈಕಸಿಯನ್ನು ಕಂಗೆಡಿಸಿತ್ತು. ಯಾಕೆಂದರೆ ದೇವ-ದಾನವರು ದಾಯಾದಿಗಳಾಗಿದ್ದ ಕಾರಣ, ಸುರರು ಅಸುರರನ್ನು ಯಾವುದೇ ಕ್ಷಣದಲ್ಲಿ ನಾಶ ಮಾಡಬಹುದು ಎನ್ನುವುದು ಕೈಕಸಿಯ ಭಯವಾಗಿತ್ತು. ರಾವಣ-ಕುಂಭಕರ್ಣರನ್ನು ದೇವತೆಗಳು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ, ಆದರೆ ಈ ವಿಭೀಷಣ ಧರ್ಮಿಷ್ಠ, ಸಜ್ಜನ - ಇಂಥವನ ಮೇಲೆ ದೇವತೆಗಳು ದಾಳಿ ಮಾಡಿದರೆ ಏನು ಮಾಡುವುದು ಎಂದು ಕೈಕಸಿಗೆ ಚಿಂತೆ ಶುರುವಾಗುತ್ತದೆ. ಹೀಗಾಗಿ ಆಕೆ ತನ್ನ ಮಗನಿಗೆ ಬ್ರಹ್ಮನ ಕುರಿತು ತಪಸ್ಸನ್ನು ಆಚರಿಸಿ ವರ ಪಡೆದುಕೊಳ್ಳುವಂತೆ ಹೇಳುತ್ತಾಳೆ.
ತಾಯಿಯ ಆದೇಶವನ್ನು ಧಿಕ್ಕರಿಸದ ವಿಭೀಷಣ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಅವನ ತಪಸ್ಸಿಗೆ ಬ್ರಹ್ಮ ಮೆಚ್ಚಿ ಪ್ರತ್ಯಕ್ಷನಾಗುತ್ತಾನೆ. ಆಗ ಬ್ರಹ್ಮನಲ್ಲಿ, ಬೇರೆ ರಕ್ಕಸರು ಕೇಳಿದ ಹಾಗೆ ತನಗೆ ಸಾವು ಬರಬಾರದು, ನನ್ನ ಕೊನೆ ಇವರಿಂದಲೇ ಆಗಬೇಕು ಎನ್ನುವ ವರಗಳನ್ನು ಕೇಳದೇ, ತಾನು ಎಂದೆಂದಿಗೂ ಸನ್ಮಾರ್ಗದಲ್ಲಿ ನಡೆಯಬೇಕು, ತಾನು ಇರುವವರೆಗೂ ಧರ್ಮವನ್ನು ಬಿಡದಂತೆ ಆಶೀರ್ವಾದ ಮಾಡು ಎಂದು ವಿಭೀಷಣ ಬ್ರಹ್ಮನನ್ನು ಕೇಳುತ್ತಾನೆ. ವಿಭೀಷಣನ ಭಕ್ತಿಗೆ ಮೆಚ್ಚಿದ ಬ್ರಹ್ಮ, "ನೀನು ಧರ್ಮ ಮಾರ್ಗದಲ್ಲೇ ನಡೆ, ನಿನ್ನ ಈ ಗುಣ ನಿನ್ನನ್ನು ಚಿರಂಜೀವಿಯಾಗಿಸಲಿ" ಎಂದು ವರವನ್ನು ಕೊಟ್ಟನಂತೆ. ಹೀಗೆ ವಿಭೀಷಣ ಚಿರಂಜೀವಿ (Immortal)ಯಾದ ಎಂದು ಹೇಳಲಾಗುತ್ತದೆ.
ವಿಭೀಷಣ ಚಿರಂಜೀವಿ ಆದದ್ದು ಹೇಗೆ.? The Story of Vibhishana.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.