ಭಾರತ ಮತ್ತು ಬ್ರಿಟನ್ ನಡುವಿನ ಫ್ರೀ ಟ್ರೇಡ್ ಅಗ್ರಿಮೆಂಟ್ (FTA) ಜುಲೈ 15ರಿಂದ ಜಾರಿಗೆ ಬಂದಿದ್ದು, ಇದೀಗ ಬ್ರಿಟನ್ ಮೂಲದ ಟಾಟಾ ಸ್ಟೀಲ್ ಯುಕೆ ಕಂಪನಿ ಈ ಒಪ್ಪಂದವನ್ನು ಮರುಪರಿಶೀಲಿಸುವಂತೆ ಬ್ರಿಟಿಷ್ ಸರ್ಕಾರಕ್ಕೆ ಒತ್ತಾಯಿಸಿದೆ. ಒಪ್ಪಂದ ಮುಂದುವರಿದರೆ ಬ್ರಿಟನ್ ಏಷ್ಯಾದ ಅಗ್ಗದ ಸ್ಟೀಲ್‌ಗೆ ಡಂಪಿಂಗ್ ಯಾರ್ಡ್ ಆಗಬಹುದು ಎಂಬ ಎಚ್ಚರಿಕೆಯನ್ನೂ ಕಂಪನಿ ನೀಡಿದೆ.
ಟಾಟಾ ಸ್ಟೀಲ್ ಯುಕೆ ಹಿನ್ನೆಲೆ: 2007ರಲ್ಲಿ ಡಚ್-ಬ್ರಿಟಿಷ್ ಕಂಪನಿ ಕೋರಸ್ (Corus) ಅನ್ನು ಖರೀದಿಸುವ ಮೂಲಕ ಟಾಟಾ ಗ್ರೂಪ್ ಬ್ರಿಟನ್ ಸ್ಟೀಲ್ ಉದ್ಯಮ ಪ್ರವೇಶಿಸಿತು. ಇಂದು ಸುಮಾರು 8,000 ಉದ್ಯೋಗಿಗಳನ್ನು ಹೊಂದಿರುವ ಈ ಸಂಸ್ಥೆ, ಭಾರತ ಹೊರತುಪಡಿಸಿ ಜಗತ್ತಿನ 20ಕ್ಕೂ ಹೆಚ್ಚು ದೇಶಗಳಲ್ಲಿ 77,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿರುವ ಟಾಟಾ ಗ್ರೂಪ್ನ ಭಾಗವಾಗಿದೆ.
FTA ಪ್ರಕಾರ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಗ್ಯಾಲ್ವನೈಸ್ಡ್ ಸ್ಟೀಲ್ (Galvanized Steel) ಟ್ಯಾರಿಫ್-ಫ್ರೀ ಕೋಟಾ 98,000 ಟನ್‌ಗಳಿಂದ 1,25,000 ಟನ್‌ಗಳಿಗೆ ಏರಿದೆ. ಇದೇ ರೀತಿ, ಬ್ರಿಟನ್-ವಿಯಟ್ನಾಂ ಒಪ್ಪಂದದ ಅಡಿ ವಿಯಟ್ನಾಂನ ಕೋಟಾ 51,000 ಟನ್‌ಗಳಿಂದ ಮೂರುಪಟ್ಟು ಅಂದರೆ 1,74,000 ಟನ್‌ಗಳಿಗೆ ಏರಿಕೆಯಾಗಿದೆ. ವಿಯಟ್ನಾಂ ಮೂಲಕ ಚೀನಾದ ಅಗ್ಗದ ಸ್ಟೀಲ್ ಬ್ರಿಟನ್ ಪ್ರವೇಶಿಸುತ್ತಿರುವುದು ಟಾಟಾ ಆತಂಕಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
Also Read: ಸಿಂಧೂ ಜಲ ಒಪ್ಪಂದ Arbitration: ಭಾರತದ ಪಾಲನ್ನೂ ಭರಿಸುತ್ತಿದೆ ಪಾಕಿಸ್ತಾನ.!
ಟಾಟಾ ಸ್ಟೀಲ್ ಯುಕೆ ಹೂಡಿಕೆ: ಕಂಪನಿ 2024ರಲ್ಲಿ ಪೋರ್ಟ್ ಟಾಲ್ಬರ್ಟ್‌ನ ಹಳೆಯ ಬ್ಲಾಸ್ಟ್ ಫರ್ನೆಸ್‌ಗಳನ್ನು ಮುಚ್ಚಿ, ₤1.25 ಬಿಲಿಯನ್ ವೆಚ್ಚದ ಎಲೆಕ್ಟ್ರಿಕ್ ಆರ್ಕ್ ಫರ್ನೆಸ್ (Electric Arc Furnace) ಸ್ಥಾಪಿಸುತ್ತಿದೆ. 2027ರ ಅಂತ್ಯದೊಳಗೆ ಕಾರ್ಯಾರಂಭಿಸಲಿರುವ ಈ ಘಟಕದಿಂದ ಲಾಭಗಳಿಕೆ ನಿರೀಕ್ಷಿಸುತ್ತಿರುವ ಟಾಟಾಗೆ, ಅಗ್ಗದ ಆಮದು ಸ್ಟೀಲ್ ಸ್ಪರ್ಧೆ ದೊಡ್ಡ ಸವಾಲಾಗಿ ಕಾಡುತ್ತಿದೆ.
ಇದು ಕೇವಲ ಇತ್ತೀಚಿನ ಬೆಳವಣಿಗೆ ಅಲ್ಲ: ಬ್ರಿಟನ್‌ನ ಟ್ರೇಡ್ ರೆಮಿಡೀಸ್ ಅಥಾರಿಟಿ (TRA) ದಾಖಲೆಗಳ ಪ್ರಕಾರ, ಟಾಟಾ ಸ್ಟೀಲ್ ಯುಕೆ 2021ರಿಂದಲೇ ಭಾರತದ ಸ್ಟೀಲ್ ಆಮದು ಬಗ್ಗೆ ಬ್ರಿಟಿಷ್ ಸರ್ಕಾರಕ್ಕೆ ದೂರು ಸಲ್ಲಿಸುತ್ತಾ ಬಂದಿದೆ. 2026ರ ಜನವರಿ-ಮಾರ್ಚ್ ಅವಧಿಯಲ್ಲಿ ಟ್ಯಾರಿಫ್ ರೇಟ್ ಕೋಟಾ ಮರುಪರಿಶೀಲನೆಗೆ ಔಪಚಾರಿಕ ಅರ್ಜಿಯನ್ನೂ ಸಲ್ಲಿಸಿತ್ತು.
India-UK FTA ಎರಡೂ ದೇಶಗಳಿಗೆ ಲಾಭದಾಯಕ ಎಂಬ ವಾದವೂ ಇದೆ. ಇದರಿಂದ ಭಾರತದ GDPಗೆ ವಾರ್ಷಿಕ ಅಂದಾಜು 5.1 ಬಿಲಿಯನ್ ಪೌಂಡ್ ಹಾಗೂ ಬ್ರಿಟನ್ ಜಿಡಿಪಿಗೆ 4.8 ಬಿಲಿಯನ್ ಪೌಂಡ್ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಬ್ರಿಟಿಷ್ ವಾಹನಗಳು, ಲಿಕ್ಕರ್, ಆಭರಣಗಳಂತಹ ಉತ್ಪನ್ನಗಳಿಗೆ ಭಾರತದಲ್ಲಿ ಕಡಿಮೆ ಟ್ಯಾರಿಫ್ ಸಿಗಲಿದೆ.
ಕಾರ್ಪೊರೇಟ್ ಕಂಪನಿಗಳು ದೇಶಪ್ರೇಮಕ್ಕಿಂತ ಲಾಭ-ನಷ್ಟದ ಲೆಕ್ಕಾಚಾರವನ್ನೇ ಮುಖ್ಯವಾಗಿಸಿಕೊಳ್ಳುತ್ತವೆ ಎಂಬುದನ್ನು ಟಾಟಾ ಸ್ಟೀಲ್ ಯುಕೆ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ. ಬ್ರಿಟಿಷ್ ಸರ್ಕಾರ ಈ ಆಕ್ಷೇಪವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ನೋಡಬೇಕಿದೆ.
ಭಾರತ-ಬ್ರಿಟನ್ ಫ್ರೀ ಟ್ರೇಡ್ ಅಗ್ರಿಮೆಂಟ್: ಏನಿದು ವಿವಾದ? TATA Steel UK.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.